ಉಸ್ಮಾನ್ ಹಾದಿ ಹ* ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕ ಟಾರ್ಗೆಟ್.
ಢಾಕಾ : ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಶಾಂತಿ ಹುಟ್ಟುಹಾಕಿದ ಷರೀಫ್ ಉಸ್ಮಾನ್ ಬಿನ್ ಹಾದಿ ಹತ್ಯೆಯ ಕೆಲವು ದಿನಗಳ ನಂತರ ಇಂದು ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಯುವ ನಾಯಕನ ಮೇಲೆ ಗುಂಡು ಹಾರಿಸಲಾಗಿದೆ. ಯುವ ನಾಯಕನನ್ನು ಬಾಂಗ್ಲಾದೇಶದ ರಾಷ್ಟ್ರೀಯ ನಾಗರಿಕ ಪಕ್ಷದ ಖುಲ್ನಾ ವಿಭಾಗೀಯ ಮುಖ್ಯಸ್ಥ ಮೋತಲೆಬ್ ಸಿಕ್ದರ್ ಎಂದು ಗುರುತಿಸಲಾಗಿದೆ. ಅವರ ತಲೆಗೆ ಗುಂಡು ಹಾರಿಸಲಾಗಿದೆ.
ಮೋತಲೆಬ್ ಸಿಕ್ದರ್ ಅವರ ತಲೆಯ ಎಡಭಾಗಕ್ಕೆ ಗುಂಡು ಹಾರಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನ್‌ಸಿಪಿಯ ಕಾರ್ಮಿಕರ ಸಂಘಟನೆಯ ನಾಯಕ 42 ವರ್ಷದ ಮೊಹಮ್ಮದ್ ಮೋತಲೆಬ್ ಸಿಕ್ದರ್ ಅವರ ಮೇಲೆ ಇಂದು ಮಧ್ಯಾಹ್ನ 12.15ರ ಸುಮಾರಿಗೆ ಖುಲ್ನಾದ ಸೋನದಂಗ ಪ್ರದೇಶದ ಮನೆಯೊಂದರಲ್ಲಿ ಗುಂಡು ಹಾರಿಸಲಾಯಿತು.
32 ವರ್ಷದ ಹಾದಿ ಇಂಕಿಲಾಬ್ ಮೊಂಚೊ ಸ್ಥಾಪಕರಾಗಿದ್ದು, ಅವರು ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಶೇಖ್ ಹಸೀನಾ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು. ಫೆಬ್ರವರಿ 12ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ಲಾನ್ ಮಾಡಿದ್ದ ಹಾದಿಗೆ ಈ ತಿಂಗಳ ಆರಂಭದಲ್ಲಿ ಢಾಕಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ತಲೆಗೆ ಗುಂಡು ಹಾರಿಸಲಾಗಿತ್ತು. ತಕ್ಷಣ ಹಾದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಸಿಂಗಾಪುರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಕಳೆದ ವಾರ ನಿಧನರಾದರು. ಅವರ ಸಾವು ಬಾಂಗ್ಲಾದೇಶದಾದ್ಯಂತ ಭಾರಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹಾದಿಯ ಹಂತಕರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಆರೋಪಿಸಿ, ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಆದರೆ, ಈ ಆರೋಪವನ್ನು ಭಾರತ ತಳ್ಳಿಹಾಕಿತ್ತು.
ಹಾದಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಸಮ್ಮುಖದಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಯಿತು. ಹಾದಿಯ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೂನಸ್ ಭರವಸೆ ನೀಡಿದ್ದರು.
For More Updates Join our WhatsApp Group :




