ಕಣ್ಣುಗಳಿಂದ ಪದೇ ಪದೇ ನೀರು ಬರುತಿದೆಯೇ? ಎಚ್ಚರ?

ಕಣ್ಣುಗಳಿಂದ ಪದೇ ಪದೇ ನೀರು ಬರುತಿದೆಯೇ? ಎಚ್ಚರ?

ಸಾಮಾನ್ಯವೆಂದು ನಿರ್ಲಕ್ಷಿಸಿದರೆ ಒಳಗಿನ ಕಾಯಿಲೆಯ ಸೂಚನೆ ಆಗಿರಬಹುದು.

ಅನೇಕರಿಗೆ ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದನ್ನು ನೀವು ನೋಡಿರಬಹುದು. ಇದು ನೋಡುವುದಕ್ಕೆ ಸಾಮಾನ್ಯ ಸಮಸ್ಯೆಯಂತೆ ಕಾಣಿಸಬಹುದು, ಆದರೆ ಕೆಲವೊಮ್ಮೆ ಇಂತಹ ಲಕ್ಷಣಗಳು ಆರೋಗ್ಯ ಸಮಸ್ಯೆಯನ್ನು ಸಹ ಸೂಚಿಸುತ್ತದೆ. ಧೂಳು, ಹೊಗೆ, ಗಾಳಿ ಅಥವಾ ದೀರ್ಘಕಾಲದವರೆಗೆ ಟಿವಿ, ಲ್ಯಾಪ್ಟಾಪ್, ಮೊಬೈಲ್ ನೋಡುವುದು ಕಣ್ಣಿನ ಕಿರಿಕಿರಿ ಮತ್ತು ಕಣ್ಣುಗಳಲ್ಲಿ ನೀರು ಬರಲು ಕಾರಣವಾಗಬಹುದು. ಆದರೆ ಈ ಸಮಸ್ಯೆ ಪದೇ ಪದೇ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಕಣ್ಣುಗಳಲ್ಲಿ ನಿರಂತರವಾಗಿ ನೀರು ಬರುವುದು ಅಲರ್ಜಿ, ಸೋಂಕುಗಳು ಅಥವಾ ಕಣ್ಣೀರಿನ ನಾಳಗಳಲ್ಲಿನ ಅಡಚಣೆಗಳಿಗೆ ಸಂಬಂಧಿಸಿರಬಹುದು. ಈ ರೀತಿಯ ಸಮಸ್ಯೆ ವಯಸ್ಸಾದ ಮೇಲೂ ಕಂಡುಬರುತ್ತದೆ. ಇದರ ಜೊತೆಗೆ, ಕಣ್ಣುಗಳ ಮೇಲ್ಮೈ ಒಣಗುವುದರಿಂದ ದೇಹವು ಹೆಚ್ಚು ಕಣ್ಣೀರು ಉತ್ಪಾದಿಸಲು ಒತ್ತಡ ಹೇರುತ್ತದೆ, ಇದರಿಂದಾಗಿ ಕಣ್ಣುಗಳಿಂದ ನೀರು ಬರುತ್ತವೆ. ಹಾಗಾಗಿ ಸರಿಯಾದ ಸಮಯಕ್ಕೆ ಈ ಸಮಸ್ಯೆಗಳನ್ನು ಗುರುತಿಸಿ ಕಣ್ಣುಗಳಿಗೆ ಹಾನಿಯಾಗುವುದನ್ನು ತಡೆಯುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಪದೇ ಪದೇ ಕಣ್ಣಲ್ಲಿ ನೀರು ಬರುವುದು ಯಾವ ರೋಗಗಳ ಲಕ್ಷಣ, ಇದನ್ನು ತಡೆಯಲು ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದಕ್ಕೆ ಕಾರಣವೇನು?

ಸರ್ ಗಂಗಾ ರಾಮ್ ಆಸ್ಪತ್ರೆಯ ಕಣ್ಣಿನ ವಿಭಾಗದ ಮಾಜಿ ಮುಖ್ಯಸ್ಥ ಡಾ. ಎ.ಕೆ. ಗ್ರೋವರ್ ಹೇಳುವ ಪ್ರಕಾರ, ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಅಲರ್ಜಿಕ್ ಕಾಂಜಂಕ್ಟಿವಿಟಿಸ್‌ನಲ್ಲಿ, ತುರಿಕೆ, ಕೆಂಪು ಮತ್ತು ಕಣ್ಣುಗಳಲ್ಲಿ ನೀರು ಬರುವುದು ಸಾಮಾನ್ಯ ಲಕ್ಷಣ. ಕಣ್ಣಿನ ಸೋಂಕು ಇದ್ದರೆ ಅತಿಯಾದ ನೀರು ಬರಬಹುದು. ಕೆಲವು ಸಮಯದಲ್ಲಿ ಕಣ್ಣುಗಳ ಶುಷ್ಕತೆಯಿಂದ ಹೆಚ್ಚು ಕಣ್ಣೀರು ಉತ್ಪಾದಿಸುತ್ತವೆ, ಇದು ಅತಿಯಾದ ನೀರು ಬರುವಿಕೆಗೆ ಕಾರಣವಾಗುತ್ತದೆ. ಇದೆಲ್ಲದರ ಜೊತೆಗೆ ಕಣ್ಣೀರಿನ ನಾಳಗಳಲ್ಲಿನ ಅಡಚಣೆ ಕೂಡ ಕಣ್ಣುಗಳಲ್ಲಿ ನಿರಂತರವಾಗಿ ನೀರು ಬರಲು ಕಾರಣವಾಗಬಹುದು.ಕೆಲವು ಸಂದರ್ಭಗಳಲ್ಲಿ, ಸೈನಸ್ ಸಮಸ್ಯೆಗಳು ಅಥವಾ ವಯಸ್ಸಾಗುವುದು ಕೂಡ ಕಣ್ಣುಗಳಲ್ಲಿ ನೀರು ಬರಲು ಕಾರಣವಾಗಬಹುದು. ಆದ್ದರಿಂದ, ಸರಿಯಾದ ಕಾರಣವನ್ನು ಗುರುತಿಸುವುದು ಬಹಳ ಮುಖ್ಯವಾಗುತ್ತದೆ.

ಕಣ್ಣುಗಳಲ್ಲಿ ಪದೇ ಪದೇ ನೀರು ಬರುವುದನ್ನು ತಡೆಯುವುದು ಹೇಗೆ?

ಕಣ್ಣುಗಳಲ್ಲಿ ನೀರು ಬರುತ್ತಿದ್ದರೆ, ಮೊದಲು ನಿಮ್ಮ ಕಣ್ಣುಗಳನ್ನು ಉಜ್ಜುವುದನ್ನು ತಪ್ಪಿಸಿ. ಧೂಳು ಮತ್ತು ಹೊಗೆಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಿ. ಅತಿಯಾದ ಮೊಬೈಲ್ ಬಳಕೆಯಿಂದಲೂ ಈ ರೀತಿಯಾಗಬಹುದು. ಹಾಗಾಗಿ ಈ ರೀತಿಯ ಸಮಸ್ಯೆ ಬಹಳ ಸಮಯದವರೆಗೆ ಮುಂದುವರಿದರೆ, ನೀವೇ ಔಷಧಿ ತೆಗೆದುಕೊಳ್ಳುವ ಬದಲು, ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ. ಸಮಯೋಚಿತ ಚಿಕಿತ್ಸೆಯು ಕಣ್ಣುಗಳಲ್ಲಿನ ಗಂಭೀರ ಸಮಸ್ಯೆಗಳನ್ನು ತಡೆಯಬಹುದು. ಮಧ್ಯಂತರಗಳಲ್ಲಿ ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ. ತಣ್ಣೀರಿನಿಂದ ನಿಮ್ಮ ಕಣ್ಣುಗಳನ್ನು ತೊಳೆಯುವುದು ಕೆಲವು ಸಂದರ್ಭಗಳಲ್ಲಿ ಪರಿಹಾರ ನೀಡುತ್ತದೆ. ಜೊತೆಗೆ ಕೊಳಕು ಕೈಗಳಿಂದ ನಿಮ್ಮ ಕಣ್ಣುಗಳನ್ನು ಮುಟ್ಟಬೇಡಿ. ಕಣ್ಣಿನ ಆರೋಗ್ಯಕ್ಕೆ ಹೆಚ್ಚಿನ ಗಮನ ಕೊಡಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *