ಲಡಾಖ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆ (ಎಲ್ ಎಸಿ) ಬಳಿ ಶನಿವಾರ ದುರ್ಘಟನೆಯೊಂದು ಜರುಗಿದೆ. ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿ (ಎಲ್ ಎಸಿ) ಬಳಿ T-72 ಟ್ಯಾಂಕ್ ನಲ್ಲಿ ನದಿಯೊಂದನ್ನು ದಾಟುತ್ತಿದ್ದಾಗ ಹಠಾತ್ ಪ್ರವಾಹ ಉಂಟಾಗಿದ್ದು, ಐವರು ಯೋಧರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಲೇಹ್‌ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೆಳಗ್ಗೆ 1 ಗಂಟೆ ಸುಮಾರಿಗೆ ಟ್ಯಾಂಕ್ ನೊಂದಿಗೆ ನದಿಯನ್ನು ದಾಟುವ ಅಭ್ಯಾಸ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸೇನಾ ಟ್ಯಾಂಕ್ ಅಪಘಾತಕ್ಕೀಡಾಗಿದ್ದು, ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿದ್ದರಿಂದ ಸೈನಿಕರು ಕೊಚ್ಚಿ ಹೋಗಿದ್ದಾರೆ
ಭಾರತದಲ್ಲಿ 24,00 ಟಿ-72 ಟ್ಯಾಂಕ್‌ಗಳಿವೆ. ಭಾರತೀಯ ಸೇನೆಯು ಈ ಟ್ಯಾಂಕ್‌ಗಳನ್ನು ಬಹಳ ಹಿಂದಿನಿಂದಲೂ ಬಳಸುತ್ತಿದೆ. ಅಪಘಾತದ ಸಮಯದಲ್ಲಿ ಇತರ ಟ್ಯಾಂಕ್‌ಗಳು ಸಹ ಅಲ್ಲಿದ್ದವು. . ಎಲ್ಲ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ ಎಂದು ಸೇನಾ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಹಿಮ ಕರಗುವಿಕೆಯಿಂದಾಗಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಊಹಿಸಲಾಗಿದೆ. ಶ್ಯೋಕ್ ಸಿಂಧೂ ನದಿಯ ಉಪನದಿಯಾಗಿದೆ.