ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟಕ್ಕೆ ಪ್ಲಾಸ್ಟಿಕ್ ತಂದವರಿಗೆ ಬೀಳುತ್ತೆ ದಂಡ

ಮೈಸೂರು: ಆಷಾಢ ಮಾಸದ ಪ್ರಯುಕ್ತ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ. ಮಾಹಿತಿ ನೀಡಿದ್ದಾರೆ.

ಪ್ರತಿ ಶುಕ್ರವಾರ ಮತ್ತು ವರ್ಧಂತಿ ನಡೆಯುವ ಜುಲೈ 12, 19, 26, 27 ಹಾಗೂ ಆಗಸ್ಟ್ 2ರ ಕಡೆಯ ಶುಕ್ರವಾರ ದೇವಾಲಯದ ವತಿಯಿಂದ ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಉಚಿತವಾಗಿ ಬೆಟ್ಟಕ್ಕೆ ಪ್ರಯಾಣಿಸಬಹುದು ಎಂದು ಅವರು ತಿಳಿಸಿದ್ದಾರೆ.

ಬೆಟ್ಟಕ್ಕೆ ವಾಹನಗಳ ಪ್ರವೇಶ ನಿಷೇಧ: ಶನಿವಾರ ಹಾಗೂ ಭಾನುವಾರ ಸಾರ್ವಜನಿಕರ ವಾಹನಗಳು ಬೆಟ್ಟಕ್ಕೆ ಬರುವಂತಿಲ್ಲ. ವಾಹನಗಳನ್ನು ಲಲಿತ ಮಹಲ್ ಪಾರ್ಕಿಂಗ್​ನಲ್ಲಿಯೇ ನಿಲ್ಲಿಸಬೇಕು. ಬಳಿಕ ಕೆಎಸ್​ಆರ್​ಟಿಸಿ ಬಸ್‌ಗಳ ಮೂಲಕ ಟಿಕೆಟ್ ಪಡೆದು ಚಾಮುಂಡಿ ಬೆಟ್ಟಕ್ಕೆ ಆಗಮಿಸಬೇಕು. (ಶಕ್ತಿ ಯೋಜನೆ ಅನ್ವಯ). ಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಬೆಟ್ಟದ ಗ್ರಾಮದಲ್ಲಿ ವಿಳಾಸವಿರುವ ಆಧಾರ್ ಕಾರ್ಡ್ ಹಾಜರುಪಡಿಸಿ ಪ್ರವೇಶ ಪಡೆಯಬಹುದು.

 ಆಷಾಢ ಮಾಸವನ್ನು ಪ್ಲಾಸ್ಟಿಕ್‌ಮುಕ್ತ ಆಷಾಢ ಮಾಸವೆಂದು ಘೋಷಿಸಲಾಗಿದೆ. ಹೀಗಾಗಿ, ಯಾವುದೇ ಪ್ಲಾಸ್ಟಿಕ್ ವಸ್ತುಗಳನ್ನು ಬೆಟ್ಟಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ತಂದಲ್ಲಿ ದಂಡ ವಿಧಿಸಲಾಗುತ್ತದೆ. ಬೆಟ್ಟದಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಕೂಡಾ ಯಾವುದೇ ಪ್ಲಾಸ್ಟಿಕ್ ಬಳಸದಂತೆ, ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್ ಬ್ಯಾಗ್ ಮತ್ತು ಇತರೆ ಪ್ಲಾಸ್ಟಿಕ್ ಮೂಲಕ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಸಿಸಿಟಿವಿ ಕಾಮೆರಾ ಅಳವಡಿಸಲಾಗಿದೆ.

ದೇವಾಲಯದ ಪ್ರವೇಶಕ್ಕೆ ಯಾವುದೇ ಪಾಸ್ ವ್ಯವಸ್ಥೆ ಇಲ್ಲ. ₹300 ಪ್ರವೇಶ, ₹50 ಪ್ರವೇಶ ಮತ್ತು ಸರ್ವ ದರ್ಶನದ ಮೂಲಕ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *