ಬಹುನಿರೀಕ್ಷಿತ 2025ರ ಟಿ20 ಏಷ್ಯಾ ಕಪ್ (Asia Cup 2025 T20I) ಟೂರ್ನಿಯ ದಿನಾಂಕ ಪ್ರಕಟವಾಗಿದೆ. ಮುಂದಿನ ಸೆಪ್ಟೆಂಬರ್ 9 ರಿಂದ 28ರ ವರೆಗೆ ಯುಎಇಯಲ್ಲಿ ನಡೆಯಲಿದೆ.
ಜುಲೈ 24 ರಂದು ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ (Asian Cricket Council) ಟೂರ್ನಿಯ ಸ್ಥಳವನ್ನ ಅಧಿಕೃತಗೊಳಿಸಲಾಯಿತು.
ಎಲ್ಲಾ 25 ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಭಾಗವಹಿಸಿದ್ದವು. ಸಭೆಯ ಬಳಿಕ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷರೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
ಈ ಬಾರಿ ಟೂರ್ನಿಯ ಹಕ್ಕು ಬಿಸಿಸಿಐನದ್ದೇ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಆಗಿದೆ. ಆದ್ರೆ ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಯಿಂದಾಗಿ 2027ರ ವರೆಗೂ ತಟಸ್ಥ ಸ್ಥಳಗಳಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಸೆ.9 ರಿಂದ ಸೆ.28ರ ವರೆಗೆ ಟೂರ್ನಿ ನಿಗದಿಯಾಗಿದ್ದು, ಭಾರತ ಮತ್ತು ಪಾಕ್ ನಡುವಿನ ಪಂದ್ಯ ಸೆ.14ರಂದು ನಡೆಯಲಿದೆ.
ಇಷ್ಟು ವರ್ಷ 6 ತಂಡಗಳ ನಡುವೆ ನಡೆಯುತ್ತಿದ್ದ ಹಣಾಹಣಿ ಈ ಬಾರಿ 8 ತಂಡಗಳ ನಡುವೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಇರಲಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತ ಮತ್ತು ಪಾಕಿಸ್ತಾನ (Ind vs Pak) ತಂಡಗಳು ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆಗಳೂ ಇವೆ. ಲೀಗ್ ಹಂತ, ಸೂಪರ್ ಸಿಕ್ಸ್ ಹಾಗೂ ಪ್ರಶಸ್ತಿ ಸುತ್ತಿಗೆ ತಲುಪಿದ್ರೆ ಮೂರು ಬಾರಿ ಮುಖಾಮುಖಿ ಆಗುವ ಸಾಧ್ಯತೆಗಳು ಇವೆ.
ಕಳೆದ ಬಾರಿ ಪಾಕ್ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಏಕದಿನ ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆದಿತ್ತು. ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಇದು 2026ರ ವಿಶ್ವಕಪ್ ಟೂರ್ನಿಗೂ ಅನುಕೂಲವಾಗಲಿದೆ
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಏಷ್ಯಾ ಕಪ್ 2025ರ ಭವಿಷ್ಯ ಅತಂತ್ರವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ `ಆಪರೇಷನ್ ಸಿಂಧೂರ’ ಪ್ರತೀಕಾರ ದಾಳಿಯಿಂದಾಗಿ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಹದಗೆಟ್ಟಿತು. ಇದರಿಂದಾಗಿ ಭಾರತವು ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ವರದಿಯಾಗಿತ್ತು. ಆದ್ರೆ ಬಿಸಿಸಿಐ ಮತ್ತು ಎಸಿಸಿ ಪಾಲಿಗೆ ಚಿನ್ನದ ಮೊಟ್ಟೆಯಾಗಿರುವ ಭಾರತ-ಪಾಕ್ ಪಂದ್ಯ ನಡೆಸಲು ಎಸಿಸಿ ಮನವೊಲಿಸಿದೆ.