ಗಾಜಾ: ಗಾಜಾದ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣ ಗಾಜಾದ ನಾಸರ್ ಆಸ್ಪತ್ರೆಯ ನಾಲ್ಕನೇ ಮಹಡಿಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆದಿದ್ದು, 4 ಪತ್ರಕರ್ತರು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. 22 ತಿಂಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಒಟ್ಟು 192 ಪತ್ರಕರ್ತರು ಸಾವನ್ನಪ್ಪಿದ್ದಾರೆ. ಇಂದಿನ ದಾಳಿಯು ದಕ್ಷಿಣ ಗಾಜಾದ ಅತಿದೊಡ್ಡ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿದೆ.
ಇತ್ತೀಚಿನ ದಾಳಿಯ ಕುರಿತು ಇಸ್ರೇಲ್ ಸೇನೆ ಇನ್ನೂ ಪ್ರತಿಕ್ರಿಯಿಸಿಲ್ಲ. ಹಮಾಸ್ ಉಗ್ರಗಾಮಿಗಳ ಇರುವಿಕೆಯನ್ನು ಉಲ್ಲೇಖಿಸಿ, ಆಸ್ಪತ್ರೆಗಳ ಬಳಿ ಅಥವಾ ಒಳಗೆ ಟಾರ್ಗೆಟ್ಗಳನ್ನು ಹೊಡೆದಿರುವುದನ್ನು ಅದು ಈ ಹಿಂದೆ ಒಪ್ಪಿಕೊಂಡಿದ್ದರೂ, ಈ ನಿರ್ದಿಷ್ಟ ಘಟನೆಯನ್ನು ಅದು ಅಧಿಕೃತವಾಗಿ ಉಲ್ಲೇಖಿಸಿಲ್ಲ.
ಇಂದು ದಾಳಿಯಲ್ಲಿ ಸಾವನ್ನಪ್ಪಿದ ಪತ್ರಕರ್ತರಲ್ಲಿ 33 ವರ್ಷದ ಮರಿಯಮ್ ದಗ್ಗಾ ಕೂಡ ಸೇರಿದ್ದಾರೆ. ಅವರು ಯುದ್ಧದ ಆರಂಭದಿಂದಲೂ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಸುದ್ದಿ ಸಂಸ್ಥೆಗಳಿಗೆ ವರದಿ ಮಾಡುತ್ತಿದ್ದರು. ಅವರು ಯುದ್ಧದ ಆರಂಭದಿಂದಲೂ ಅಸೋಸಿಯೇಟೆಡ್ ಪ್ರೆಸ್ ಮತ್ತು ಇತರ ಸುದ್ದಿ ಸಂಸ್ಥೆಗಳಿಗೆ ವರದಿ ಮಾಡುತ್ತಿದ್ದರು. ಅವರು ಗಾಜಾದಲ್ಲಿ ಹದಗೆಡುತ್ತಿರುವ ಮಾನವೀಯ ಬಿಕ್ಕಟ್ಟನ್ನು ವರದಿ ಮಾಡಿದ್ದರು. ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಅಲ್ ಜಜೀರಾ ತನ್ನ ಪತ್ರಕರ್ತ ಮೊಹಮ್ಮದ್ ಸಲಾಮ್ ಕೂಡ ಒಬ್ಬರು ಎಂದು ದೃಢಪಡಿಸಿದೆ. ರಾಯಿಟರ್ಸ್ ತನ್ನ ವರದಿಗಾರ ಕೂಡ ಸಾವನ್ನಪ್ಪಿದ್ದಾರೆ.
ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯನ್ನು 22 ತಿಂಗಳ ಕಾಲ ನಡೆದ ಸಂಘರ್ಷದ ಉದ್ದಕ್ಕೂ ಪದೇ ಪದೇ ಟಾರ್ಗೆಟ್ ಮಾಡಲಾಗಿದೆ. ಜೂನ್‌ನಲ್ಲಿ ಅದೇ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರು ಮತ್ತು 10 ಜನರು ಗಾಯಗೊಂಡಿದ್ದರು. ಆ ಸಮಯದಲ್ಲಿ, ಇಸ್ರೇಲ್ ರಕ್ಷಣಾ ಪಡೆಗಳು (IDF) ಆಸ್ಪತ್ರೆಯ ಒಳಗಿನಿಂದ ಕಾರ್ಯನಿರ್ವಹಿಸುತ್ತಿರುವ ಹಮಾಸ್ ಕಮಾಂಡರ್ ಮತ್ತು ನಿಯಂತ್ರಣ ಕೇಂದ್ರವನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡವು.
ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಸಂಘರ್ಷ ಪ್ರಾರಂಭವಾದಾಗಿನಿಂದ 62,686ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಕೊಲ್ಲಲ್ಪಟ್ಟವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಮೂಲಗಳು ತಿಳಿಸಿವೆ.
For More Updates Join our WhatsApp Group :