ATM ಬಳಕೆದಾರರಿಗೆ ಬ್ಯಾಡ್ ನ್ಯೂಸ್ : ನಗದು ಹಿಂಪಡೆಯುವ ಶುಲ್ಕ ಹೆಚ್ಚಳ

ಎಟಿಎಂನಿಂದ ಮಿತಿ ಮೀರಿದ ವಹಿವಾಟಿಗೆ ಗ್ರಾಹಕರಿಗೆ ವಿಧಿಸುವ ಶುಲ್ಕದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದ ಎಟಿಎಂ ಆಪರೇಟರ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ವನ್ನು ಸಂಪರ್ಕಿಸಿದ್ದು, ಗ್ರಾಹಕರು ನಗದು ಹಿಂಪಡೆಯುವಿಕೆಯ ಮೇಲೆ ಪಾವತಿಸುವ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಲು ಕೋರಿದ್ದಾರೆ.

ಎಟಿಎಂ ಉದ್ಯಮದ ಒಕ್ಕೂಟ (ಸಿಎಟಿಎಂಐ) ವ್ಯವಹಾರಕ್ಕೆ ಹೆಚ್ಚಿನ ಹಣವನ್ನು ಪಡೆಯಲು ಪ್ರತಿ ವಹಿವಾಟಿಗೆ ಇಂಟರ್‌ಚೇಂಜ್ ಶುಲ್ಕವನ್ನು ಗರಿಷ್ಠ ₹23 ರೂಪಾಯಿ ಹೆಚ್ಚಿಸಲು ಆರ್‌ಬಿಐಗೆ ಕೇಳಿದೆ. ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸ್ಟಾನ್ಲಿ ಜಾನ್ಸನ್ ಅವರು ಎರಡು ವರ್ಷಗಳ ಹಿಂದೆ ಕೊನೆಯ ಬಾರಿ ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

“ನಾವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ಸಂಪರ್ಕಿಸಿದ್ದೇವೆ. ಎಟಿಎಂಗಳಲ್ಲಿ ನಗದು ಹಿಂಪಡೆಯಲು ಗ್ರಾಹಕರು ಪಾವತಿಸುವ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸುವ ನಮ್ಮ ಮನವಿಗೆ ಆರ್‌ಬಿಐ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಿಎಟಿಎಂಐ ಈ ಶುಲ್ಕವನ್ನು ₹21 ರಷ್ಟು ಹೆಚ್ಚಿಸಲು ಪ್ರಸ್ತಾಪಿಸಿದರೆ, ಇತರ ಕೆಲವು ಎಟಿಎಂ ಆಪರೇಟರ್‌ಗಳು ಇದನ್ನು ₹23 ಕ್ಕೆ ಹೆಚ್ಚಿಸಲು ಬಯಸಿದ್ದರು. ಈ ಹಿಂದೆ ಇಂಟರ್​ಚೇಂಜ್ ಶುಲ್ಕ ಹೆಚ್ಚಿಸಿ ಹಲವು ವರ್ಷಗಳೇ ಕಳೆದಿವೆ” ಎಂದು ಸ್ಲ್ಯಾನ್ಸಿ ಜಾನ್ಸನ್ ತಿಳಿಸಿದರು.

“ಎಟಿಎಂ ಶುಲ್ಕವನ್ನು ಹೆಚ್ಚಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್‌ಪಿಸಿಐ) ನಿಯೋಗವನ್ನು ರಚಿಸಲಾಗಿದೆ. ತಂಡವು ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿದೆ. ಬ್ಯಾಂಕ್‌ಗಳು ಸಹ ಶುಲ್ಕವನ್ನು ಹೆಚ್ಚಿಸಲು ಒಪ್ಪಿಕೊಂಡಿವೆ” ಎಂದು ಎಟಿಎಂ ತಯಾರಕರೊಬ್ಬರು ಹೇಳಿದರು.

ಏತನ್ಮಧ್ಯೆ, ಎಟಿಎಂ ವಹಿವಾಟುಗಳ ಇಂಟರ್​ಚೇಂಜ್ ಶುಲ್ಕವನ್ನು 2021ರಲ್ಲಿ ₹15 ರಿಂದ ₹17 ಕ್ಕೆ ಹೆಚ್ಚಿಸಲಾಗಿದೆ. ಎಟಿಎಂ ನಿರ್ವಾಹಕರ ಮನವಿಯಂತೆ ಆರ್​ಬಿಐ ಗ್ರೀನ್ ಸಿಗ್ನಲ್ ನೀಡಿದರೆ ₹23 ಹೆಚ್ಚಳ ಆಗಲಿದೆ.

Leave a Reply

Your email address will not be published. Required fields are marked *