ಮೇಟಿ ಕುಟುಂಬದ ಒಳಜಗಳದಿಂದ ಕಾಂಗ್ರೆಸ್ಗೆ ತಲೆನೋವು
ಬಾಗಲಕೋಟೆ : ಬಾಗಲಕೋಟೆ ಉಪಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಬಿಕ್ಕಟ್ಟು ತೀವ್ರಗೊಂಡಿದೆ. ಮಾಜಿ ಸಚಿವ, ಶಾಸಕ ದಿ. ಎಚ್ವೈ ಮೇಟಿ ಅವರ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ಇನ್ನೂ ಗೊಂದಲದಲ್ಲೇ ಉಳಿದಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುಂದಾಗಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಮೇಟಿ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಮ್ಮತ ಸಾಧಿಸಲು ಸೂಚನೆ ನೀಡಿದರೂ, ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ.
ಮೇಟಿ ಕುಟುಂಬದ ಮಕ್ಕಳಾದ ಮಲ್ಲಿಕಾರ್ಜುನ ಮೇಟಿ ಮತ್ತು ಉಮೇಶ್ ಮೇಟಿ ನಡುವೆ ತೀವ್ರ ಪೈಪೋಟಿ ಇದೆ. ಇವರಿಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಸಹೋದರರು ಹೇಳಿಕೊಂಡಿದ್ದಾರೆ. ಆದರೆ ಕೊನೆಯ ಪುತ್ರಿ ಮಹಾದೇವಿ ಮೇಟಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ನೀಡಿದರೆ ಬಂಡಾಯಕ್ಕೆ ಇಳಿಯುವ ಸೂಚನೆ ನೀಡಿದ್ದಾರೆ.
ಮಹಾದೇವಿ ಮೇಟಿ ತಾವು ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದು, ಇಂದೇ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಅವರ ಇಚ್ಛೆಯಂತೆ ಉಮೇಶ್ ಮೇಟಿಗೆ ಟಿಕೆಟ್ ನೀಡಿದರೆ ಮಾತ್ರ ಒಮ್ಮತ ಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.
ಇನ್ನೊಂದೆಡೆ, ಯಾರಿಗೆ ಟಿಕೆಟ್ ನೀಡಿದರೂ ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಮತ್ತೊಬ್ಬ ಪುತ್ರಿ ಬಾಯಕ್ಕ ಮೇಟಿ ಹೇಳಿದ್ದಾರೆ. ಆದರೂ ಕುಟುಂಬದ ಒಳಜಗಳ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದು, ಇದು ಬಿಜೆಪಿ ಪಾಲಿಗೆ ಲಾಭವಾಗುವ ಸಾಧ್ಯತೆಯೂ ಇದೆ.
ಒಟ್ಟಿನಲ್ಲಿ, ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ನೀಡಿದರೆ ಬಂಡಾಯದ ಬಿಸಿ ಎದುರಾಗುವ ಸಾಧ್ಯತೆ ಇದ್ದು, ಉಮೇಶ್ ಮೇಟಿಗೆ ಟಿಕೆಟ್ ನೀಡಿದರೆ ಒಗ್ಗಟ್ಟು ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂತಿಮವಾಗಿ ಕಾಂಗ್ರೆಸ್ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.
For More Updates Join our WhatsApp Group :




