ವಾರಣಾಸಿ: ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಬನಾರಸ್ ಹಿಂದೂ ವಿಶ್ವವಿದ್ಯಾಲಯ) ಬಿಟೆಕ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಿಗಳಾದ ಕುನಾಲ್ ಪಾಂಡೆ ಮತ್ತು ಆನಂದ್ ಚೌಹಾಣ್‌ಗೆ ಅಲಹಾಬಾದ್ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜನವರಿ 2024 ರಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಏಳು ತಿಂಗಳ ನಂತರ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಮೂರನೇ ಆರೋಪಿ ಸಾಕ್ಷಾ ಪಟೇಲ್ ನ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 14, 2024 ರಂದು ಪರಿಶೀಲಿಸಲಿದೆ ಎಂದು ವರದಿಯಾಗಿದೆ.
ಆರೋಪಿಗಳ ಪೈಕಿ, ಕುನಾಲ್ ಆಗಸ್ಟ್ 24 ರಂದು ಬಿಡುಗಡೆಯಾಗಿದ್ದರೆ, ಆನಂದ್ ಆಗಸ್ಟ್ 29 ರಂದು ಬಿಡುಗಡೆಯಾಗಿದ್ದಾನೆ. ಆರೋಪಿ ಆನಂದ್ ನಾಗವಾ ಕಾಲೋನಿಯಲ್ಲಿರುವ ತನ್ನ ಮನೆಗೆ ಬಂದಾಗ ಹೂಹಾರ ಹಾಕಿ ಸ್ವಾಗತಿಸಲಾಯಿತು ದೈನಿಕ್ ಜಾಗರಣ್ ವರದಿ ಮಾಡಿದೆ. ಕುನಾಲ್ ಮತ್ತು ಆನಂದ್ ಅವರ ಮನೆಗಳು ಅಕ್ಕಪಕ್ಕದಲ್ಲೇ ಇದೆ.
ಘಟನೆಯು ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಾರಣಾಸಿಯ ಭಾರತೀಯ ಐಐಟಿ-ಬಿಎಚ್‌ಯು ಕ್ಯಾಂಪಸ್‌ನಲ್ಲಿ ನವೆಂಬರ್ 2 2023 ರಂದು 20 ವರ್ಷದ ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಹೊರಗೆ ಹೋಗಿದ್ದಾಗ ಮೂವರು ಆರೋಪಿಗಳು ವಿದ್ಯಾರ್ಥಿಯನ್ನು ಅಪಹರಿಸಿ, ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತೆಯು ಕರ್ಮಾನ್ ಬಾಬಾ ದೇವಸ್ಥಾನದ ಸಮೀಪದಲ್ಲಿದ್ದಾಗ ಮೋಟಾರ್ ಸೈಕಲ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಆಕೆಯನ್ನು ಒಂದೆಡೆ ಒಯ್ದು ಬಲವಂತವಾಗಿ ಬಾಯಿ ಮುಚ್ಚಿಸಿದರು ಎನ್ನಲಾಗಿದೆ.
ಮೂವರು ಆರೋಪಿಗಳು ಬಂದೂಕಿನ ನಳಿಕೆಯನ್ನು ಸಂತ್ರಸ್ತೆಯ ತಲೆಗೆ ಇಟ್ಟು ಬೆದರಿಸಿ, ವಿವಸ್ತ್ರ ಗೊಳಿಸುವ, ದೌರ್ಜನ್ಯದ ವಿಡಿಯೋ ಚಿತ್ರೀಕರಣ ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಡಿಸೆಂಬರ್ 31 ರಂದು ಬಹಿರಂಗಪಡಿಸಿವೆ.
ಡಿಸೆಂಬರ್ 31 ರಂದು ಕುನಾಲ್ ಪಾಂಡೆ, ಅಭಿಷೇಕ್ ಚೌಹಾಣ್ ಅಲಿಯಾಸ್ ಆನಂದ್ ಮತ್ತು ಸಕ್ಷಮ್ ಪಟೇಲ್ ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅದರೊಂದಿಗೆ ಅಪರಾಧಕ್ಕೆ ಬಳಸಲಾದ ದ್ವಿಚಕ್ರವಾಹನಗಳು, ಮೊಬೈಲ್ ಫೋನ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುನಾಲ್ ಮತ್ತು ಸಕ್ಷಮ್ ಬಿಜೆಪಿ ಐಟಿ ಸೆಲ್‌ನ ಸದಸ್ಯರಾಗಿದ್ದಾರೆ.