ಧಾರವಾಡ ಬಿಜೆಪಿ ಮುಖಂಡ ಕೊ* ಪ್ರಕರಣ: ಹೈಕೋರ್ಟ್ ಆದೇಶದ ಬಳಿಕ ಮತ್ತೆ ಜೈಲು
ಬೆಂಗಳೂರು: ಧಾರವಾಡ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ15ನೇ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಸಿದೆ. ಸುಪ್ರೀಂಕೋರ್ಟ್ಗೇ ಅರ್ಜಿ ಸಲ್ಲಿಸುವುದು ಸೂಕ್ತವೆಂದು ಹೇಳಿ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿಯಾಗಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣದ 15ನೇ ಆರೋಪಿಯಾಗಿದ್ದು, ಈ ಪ್ರಕರಣ ಸಂಬಂಧ ವಿನಯ್ ಕುಲಕರ್ಣಿಗೆ 2021ರಲ್ಲೇ ಕೋರ್ಟ್ನಿಂದ ಜಾಮೀನು ಸಿಕ್ಕಿತ್ತು. ಆದ್ರೆ, ಇತ್ತೀಚೆಗೆ ಸಾಕ್ಷಗಳಿಗೆ ಬೆದರಿಕೆ ಹಾಕುವ ಮೂಲಕ ಜಾಮೀನು ಷರತ್ತುಗಳನ್ನು ವಿನಯ್ ಕುಲಕರ್ಣಿ ಉಲ್ಲಂಘಿಸಿದ್ದು, ಜಾಮೀನು ರದ್ದುಪಡಿಸುವಂತೆ ಸಿಬಿಐ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಬಳಿಕ ಸುಪ್ರೀಂಕೋರ್ಟ್ ಸಿಬಿಐನ ಸಾಕ್ಷಿಗಳನ್ನ ಪರಿಶೀಲಿಸಿ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ ಹೋಗಬೇಕಾಯ್ತು. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಇದೀಗ ಹೈಕೋರ್ಟ್ ಹೇಳಿದಂತೆ ವಿನಯ್ ಕುಲಕರ್ಣಿ ಜಾಮೀನುಗಾಗಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಬೇಕು.
2016ರಲ್ಲಿ ನಡೆದಿದ್ದ ಯೋಗೇಶ್ ಗೌಡ ಹತ್ಯೆ
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಬಿಜೆಪಿಯ ಯೋಗೇಶ್ ಗೌಡರನ್ನು 2016ರ ಜೂನ್ 15ರಂದು ಧಾರವಾಡದ ಸಪ್ತಪುರದ ಜಿಮ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ 21 ಆರೋಪಿಗಳು ಶಾಮೀಲಾಗಿದ್ದಾರೆ ಎಂಬ ಮಾಹಿತಿ ಇದೆ. ಆರಂಭದಲ್ಲಿ ಸ್ಥಳೀಯ ಪೊಲೀಸರು 6 ಮಂದಿಯನ್ನು ಆರೋಪಿಗಳಾಗಿ ಗುರುತಿಸಿದ್ದರು, ಆದರೆ ಯೋಗೇಶ್ ಗೌಡ ಕುಟುಂಬದ ಅರ್ಜಿಯ ಮೇರೆಗೆ ಬಿಜೆಪಿ ಸರ್ಕಾರದಿಂದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
For More Updates Join our WhatsApp Group :




