ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದೆ. ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಗುರುವಾರ ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ಬೆನ್ನಲ್ಲೇ ನಗರದ 11 ಆರ್.ಟಿ.ಒ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಒಳಗೊಂಡಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ನಗರದಲ್ಲಿ ಬಸ್, ರೈಲು ಹಾಗೂ ಮೆಟ್ರೋ ರೈಲು ನಿಲ್ದಾಣಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ವಾಹನಗಳ ಸಂಚಾರ ದಟ್ಟಣೆಯನ್ನ ನಿಯಂತ್ರಿಸುವ ಉದ್ದೇಶದಿಂದ 2021ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕ ಇ-ಬೈಕ್ ಟ್ಯಾಕ್ಸಿ ಯೋಜನೆಯನ್ನ ಜಾರಿಗೊಳಿಸಿತ್ತು. ಮತ್ತು ಆ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಗೆ ಇ-ಟ್ಯಾಕ್ಸಿ ಸೇವೆ ನೀಡಲು ಪರವಾನಗಿ ನೀಡಿತ್ತು. ವೈಟ್ ಬೋರ್ಡ್ ಹೊಂದಿರುವ ಬೈಕ್‌ಗಳ ಮೂಲಕವೂ ಟ್ಯಾಕ್ಸಿ ಸೇವೆ ಒದಗಿಸಲು ಸರ್ಕಾರ ಅನುಮತಿ ನೀಡಿತ್ತು.
ಸರ್ಕಾರದ ಆದೇಶವನ್ನ ತೀವ್ರವಾಗಿ ವಿರೋಧಿಸಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅನೇಕ ಕಡೆಗಳಲ್ಲಿ ಬೈಕ್ ಟ್ಯಾಕ್ಸಿ ಸವಾರರನ್ನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಪ್ರಕರಣಗಳು ವರದಿಯಾಗಿದ್ದವು. ಅಲ್ಲದೆ ಗ್ರಾಹಕ ಮಹಿಳೆಯರಿಗೆ ಬೈಕ್ ಟ್ಯಾಕ್ಸಿ ಚಾಲಕರು ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳೂ ಸಹ ದಾಖಲಾಗಿದ್ದವು.