ಬೆಂಗಳೂರು: ನಿಷೇಧಿತ ಸಿಪಿಐ ಮಾವೋವಾದಿಗಳ ಪರ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ನಕ್ಸಲೈಟ್ ಓರ್ವನನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಅನಿರುದ್ಧ ರಾಜನ್ ಬಂಧಿತ ನಕ್ಸಲೈಟ್. ನಗರದ ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ನೇಹಿತೆಯನ್ನು ನೋಡಲು ಬರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಭಯೋತ್ಪಾದಕ ನಿಗ್ರಹದಳದ (ಎಟಿಸಿ) ಅಧಿಕಾರಿಗಳು ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
“ಸಿಪಿಐ ಮಾವೋವಾದಿಗಳ ಪರವಾಗಿ ಕೆಲಸ ಮಾಡುತ್ತಿದ್ದ ಅನಿರುದ್ಧ ನಿಷೇಧಿತ ಬರಹಗಳನ್ನು ಪ್ರಚುರಪಡಿಸುತ್ತಿದ್ದ. ಇದುವರೆಗೂ ಯಾವ ಪೊಲೀಸರಿಗೂ ಸಿಕ್ಕಿಬಿದ್ದಿರಲಿಲ್ಲ. ಗೆಳತಿಯನ್ನು ನೋಡಲು ಮೂರರಿಂದ ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅನಿರುದ್ಧ ನಿಷೇಧಿತ ಸಂಘಟನೆ ಪರ ಕೆಲಸ ಮಾಡುತ್ತಿದ್ದ. ಹಣ ಸಂಗ್ರಹ ಹಾಗೂ ಗುಪ್ತ ಸಭೆ ನಡೆಸುತ್ತಿದ್ದ. ಗುರುವಾರ ಬೆಳಗ್ಗೆ ಮೆಜೆಸ್ಟಿಕ್‌ನಿಂದ ಚೆನ್ಮೈಗೆ ಹೋಗಲು ಬಸ್ ನಿಲ್ದಾಣ ಬಳಿ ಕಾಯುತ್ತಿದ್ದಾಗ ಆತನನ್ನು ಬಂಧಿಸಲಾಯಿತು” ಎಂದು ಅಧಿಕಾರಿಗಳು ತಿಳಿಸಿದರು.
“ವಿಕಾಸ್ ಘಾಡ್ಗೆ ಎಂಬ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಮಾಡಿಕೊಂಡಿದ್ದ ಆರೋಪಿಯಿಂದ ಸದ್ಯ 2 ಬ್ಯಾಗ್ಗಳು, ಪೆನ್ಡ್ರೈವ್ಗಳು, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.