ಬೆಂಗಳೂರು || ಮಳೆಯ ನಡುವೆಯೇ ಹೊತ್ತಿ ಉರಿದ ಎಲೆಕ್ಟ್ರಿಕ್ ಬಸ್

ಬೆಂಗಳೂರು: ಭಾರೀ ಮಳೆಯ ನಡುವೆಯೇ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ (Electric BMTC Bus) ಹೊತ್ತಿ ಉರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸೋಮವಾರ ರಾತ್ರಿ 11:30ರ ಸುಮಾರಿಗೆ ಘಟನೆ ನಡೆದಿದ್ದು, ಬಸ್ ಸಂಪೂರ್ಣ ಬೆಂಕಿಗಾಹುತಿ ಆಗಿದೆ. ಎಲೆಕ್ಟ್ರಿಕ್ ಬಸ್ ನಾಗಾವರ ಕಡೆಯಿಂದ ಹೆಬ್ಬಾಳ ಕಡೆಗೆ ಬರುತ್ತಿತ್ತು. ಹೆಬ್ಬಾಳದ BWSSB ಬಳಿಯ ಸರ್ವಿಸ್ ರಸ್ತೆಗೆ ಬರುತ್ತಿದ್ದಂತೆ ಏಕಾಏಕಿ ಬಸ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಕಂಡಕ್ಟರ್ ಬಸ್‌ನಿಂದ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಏಕಾಏಕಿ ಬಸ್ ಹೊತ್ತಿ ಉರಿದಿದೆ.

ಜೋರು ಮಳೆಯ ಪರಿಣಾಮ ಬಸ್‌ನ ಎಂಜಿನ್‌ಗೆ ನೀರು ಹೋಗಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನ ಅಧಿಕಾರಿಗಳು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸುವ ಸಲುವಾಗಿ ಅಗ್ನಿಶಾಮಕ ವಾಹನಗಳು ಬಂದ ಪರಿಣಾಮ ಹೆಬ್ಬಾಳ ಕಡೆಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸುಮಾರು ಎರಡು ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತಿದ್ದವು. ಸುಮಾರು 8 ಕಿಲೋ ಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯಿಂದ ಬಸ್ ತೆರವು ಕಾರ್ಯ ನಡೆಯಿತು

Leave a Reply

Your email address will not be published. Required fields are marked *