ಸುಪ್ರೀಂ ಕೇಂದ್ರಕ್ಕೆ ಚಾಟಿ ಬೀಸಿದ ಮೇಲೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಉಚಿತ ಲಸಿಕೆ ಘೋಷಿಸಿದ್ದಾರೆ – ಸಿದ್ದರಾಮಯ್ಯ

ಬೆಂಗಳೂರು : ರಾಜ್ಯದ ಜನರ ಹಿತ ಕಾಪಾಡಲು ವಿಫಲವಾಗಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಒಬ್ಬ ಅಸಮರ್ಥ, ವಿಫಲ ಮುಖ್ಯಮಂತ್ರಿ. ಅವರನ್ನು ಬದಲಾವಣೆ ಮಾಡುವುದರಿಂದ ಪಾಪ ತೊಳೆದುಕೊಳ್ಳಬಹುದು ಎಂದು ಬಿಜೆಪಿ ಹೈಕಮಾಂಡ್ ತಿಳಿದುಕೊಂಡಿದೆ. ಆದರೆ ಪೂರ್ತಿ ಬಸ್ ಕೆಟ್ಟುಹೋಗಿರುವ ಕಾರಣ ಡ್ರೈವರ್ ಬದಲಾಯಿಸಿದರೆ ಏನೂ ಪ್ರಯೋಜನವಾಗದು ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಈ ವರೆಗೆ ಸರಿಯಾಗಿ ರೂ. 1 ಸಾವಿರ ಕೋಟಿಯನ್ನು ಪರಿಹಾರವಾಗಿ ನೀಡಿಲ್ಲ, ಕೇವಲ ತೋರಿಕೆಗಾಗಿ ಕೆಲವರಿಗೆ ಪರಿಹಾರ ನೀಡಿದ್ದಾರೆ. ಎಲ್ಲಾ ಬಿ.ಪಿ.ಎಲ್ ಕಾರ್ಡುದಾರರಿಗೆ ತಲಾ ಹತ್ತು ಕೆ.ಜಿ ಅಕ್ಕಿ ಮತ್ತು ರೂ.10,000 ಪರಿಹಾರ ನೀಡಿದ್ದರೆ ನಿಜವಾದ ಪರಿಹಾರವಾಗುತ್ತಿತ್ತು ಎಂದು ಹೇಳಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪ ಬೇಡದ ಕೂಸಾಗಿದ್ದಾರೆ, ಕಿತ್ತುಹಾಕಲು ಹೈಕಮಾಂಡ್ ಸಿದ್ಧ ಇದೆ, ರಾಜ್ಯ ಬಿಜೆಪಿ ನಾಯಕರು ಕೂಡಾ ಕೊಡವಿಕೊಳ್ಳಲು ಸಿದ್ಧ ಇದ್ದಾರೆ. ಬಿಎಸ್ ಯಡಿಯೂರಪ್ಪ ನಿರ್ಗಮನದ ನಂತರ ಪಕ್ಷದ ಸ್ಥಿತಿ ಏನಾಗಬಹುದೆಂಬ ಚಿಂತೆ ಅವರಿಗೆ. ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ, ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ ಎಂದಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಬಗೆ ಬಗೆಯ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜೀನಾಮೆ ಕೊಡ್ತೀನಿ ಅಂತಾರೆ, ಇನ್ನೊಂದೆಡೆ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಶಾಸಕರ ಸಹಿ ಸಂಗ್ರಹಿಸುತ್ತಿದ್ದಾರೆ. ಅವರಿಗೆ ರಾಜ್ಯದ ಚಿಂತೆ ಇಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ ಎಂದು ಗೇಲಿ ಮಾಡಿದ್ದಾರೆ.

ದೇಶದ ಪ್ರತಿ ಪ್ರಜೆಗೂ ಉಚಿತವಾಗಿ ಕೊರೊನಾ ಲಸಿಕೆಯನ್ನು ಕೇಂದ್ರ ಸರ್ಕಾರವೇ ನೀಡಬೇಕು ಎಂದು ಮೊದಲಿನಿಂದಲೂ ನಾವು ಒತ್ತಾಯ ಮಾಡುತ್ತ ಬಂದಿದ್ದೆವು. ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ ಮೇಲೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಲಸಿಕೆ ಘೋಷಿಸಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲೆಯ ಐ.ಎ.ಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆ.ಡಿ.ಎಸ್ ನ ಸಾ.ರಾ ಮಹೇಶ್ ಕಾರಣ. ಸಂಸದ ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದ್ರು, ಈಗ ಶಿಲ್ಪಾನಾಗ್ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಬ್ಬರನ್ನೂ ಎತ್ತಿಕಟ್ಟಿ ಜಗಳ ತಂದಿಟ್ಟಿದ್ದಾರೆ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿ ಕರೆದು ಮಾತನಾಡಲು ಅಧಿಕಾರಿಗಳಿಗೆ ಅನುಮತಿ ನೀಡಿದವರು ಯಾರು? ಅನುಮತಿ ಇಲ್ಲದೆ ಪತ್ರಿಕಾಗೋಷ್ಠಿ ಕರೆಯಲು ಅವಕಾಶ ಇಲ್ಲ. ವರ್ಗಾವಣೆ ಮಾಡಿದರಷ್ಟೇ ಸಾಲದು ನಿಯಮ ಉಲ್ಲಂಘಿಸಿದ ಇಬ್ಬರು ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣದ ಯಾವುದು? ಅದರಲ್ಲಿ ಯಾರೆಲ್ಲಾ ರಾಜಕಾರಣಿಗಳ ಷಾಮೀಲಾಗಿದ್ದಾರೆ? ಈ ವಿಷಯದಲ್ಲಿ ಯಾವ ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಅವರನ್ನು ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು ಎಂದು ತಿಳಿಸಿದ್ದಾರೆ.

ಸರ್ಕಾರ ಸದೃಢವಾಗಿದ್ದರೆ ಅಧಿಕಾರಿಗಳು ಈ ರೀತಿ ಬೇಕಾಬಿಟ್ಟಿ ನಡೆದುಕೊಳ್ಳುತ್ತಿರಲಿಲ್ಲ. ರಾಜಕಾರಣಿಗಳು ಅಧಿಕಾರಿಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ಕೆಲಸ ಮಾಡಬಾರದು. ಅದು ತಪ್ಪು. ಇದು ರಾಜಕೀಯ ನಾಯಕತ್ವದ ವೈಫಲ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *