ನವದೆಹಲಿ: ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸುವುದಕ್ಕೆ ಚುನಾವಣೆಯಲ್ಲಿ ನಡೆದ ವಂಚನೆಯೇ ಕಾರಣ ಎಂದಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ‘ಚುನಾವಣಾ ಆಯೋಗ ಕರ್ನಾಟಕದಲ್ಲಿ ಅಕ್ರಮ ಎಸಗಲು ಅವಕಾಶ ನೀಡಿರುವುದಕ್ಕೆ ನಮ್ಮ ಬಳಿ 100% ಸಾಕ್ಷಿ ಇದೆ! ಚುನಾವಣಾ ಆಯೋಗ ಅನಗತ್ಯವಾಗಿ ಮತದಾರರ ಹೆಸರು ಸೇರಿಸುವುದು, ತೆಗೆಯುವುದು ಮಾಡಿರುವುದನ್ನು ಪತ್ತೆ ಮಾಡಿದ್ದೇವೆ! ನೀವು, ನಿಮ್ಮ ಅಧಿಕಾರಿಗಳು ಇದರಿಂದ ಪಾರಾಗುತ್ತೇವೆ ಎಂದು ಭಾವಿಸಿದ್ದರೆ ಅದು ತಪ್ಪು. ನೀವು ಪಾರಾಗಲು ಸಾಧ್ಯವಿಲ್ಲ. ಏಕೆಂದರೆ, ನಾವು ನಿಮ್ಮ ಹಿಂದೆ ಬಿದ್ದಿದ್ದೇವೆ!’ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಚುನಾವಣಾ ಆಯೋಗ ದಾಖಲೆ ಸಮೇತ ರಾಹುಲ್ ಗಾಂಧಿಯ ಆರೋಪಕ್ಕೆ ತಕ್ಕ ಉತ್ತರ ನೀಡಿದೆ.

ಕರ್ನಾಟಕದ ಒಂದು ಸ್ಥಾನದಲ್ಲಿ ಮತಗಳನ್ನು ಕದಿಯಲು ಇಸಿಐ ಅವಕಾಶ ನೀಡಿದೆ ಎಂಬುದಕ್ಕೆ ತಮ್ಮ ಬಳಿ 100% ಪುರಾವೆಗಳಿವೆ. ಅಂತಹ ವಿಷಯ ಎಲ್ಲೆಡೆ ನಡೆಯುತ್ತಿದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಆಯೋಗ ಬಲವಾಗಿ ನಿರಾಕರಿಸಿತು. ತಮ್ಮ ಆರೋಪಕ್ಕೆ ಶೇ. 100ರಷ್ಟು ಪುರಾವೆಯಿದೆ ಎಂದು ಹೇಳಿಕೊಂಡಿದ್ದ ರಾಹುಲ್ ಗಾಂಧಿಯ ಹೇಳಿಕೆಯನ್ನು ಚುನಾವಣಾ ಆಯೋಗವು ಸತ್ಯ ಪರಿಶೀಲನೆ ಮಾಡಿದೆ. ಕಾಂಗ್ರೆಸ್ ಪಕ್ಷ ಮತ್ತು ಅದರ ಸೋತ ಅಭ್ಯರ್ಥಿಗಳು ಚುನಾವಣೆಯ ನಂತರ ಒಂದೇ ಒಂದು ಅರ್ಜಿಯನ್ನು ಸಲ್ಲಿಸಲಿಲ್ಲ ಎಂದು ಆಯೋಗ ಹೇಳಿದೆ.
ಕರ್ನಾಟಕದ ಚುನಾವಣಾ ಅಧಿಕಾರಿ ಕೂಡ ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಮತದಾರರ ಪಟ್ಟಿಯನ್ನು ಪಾರದರ್ಶಕವಾಗಿ ಸಿದ್ಧಪಡಿಸಲಾಗಿದೆ. ಆ ಪ್ರತಿಗಳನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ವಕ್ತಾರರು ಹೇಳಿದ್ದಾರೆ.
“ಭಾರತೀಯ ಚುನಾವಣಾ ಆಯೋಗದ ವಿರುದ್ಧ ಇಂತಹ ಆಧಾರರಹಿತ ಮತ್ತು ಬೆದರಿಕೆ ಆರೋಪಗಳನ್ನು ಏಕೆ ಮಾಡಲಾಗುತ್ತಿದೆ ಎಂದು ಚುನಾವಣಾ ಆಯೋಗಕ್ಕೆ ಆಶ್ಚರ್ಯವಾಗುತ್ತಿದೆ. ಈಗ ಕೂಡ ಅದೇ ಆರೋಪವನ್ನು ಮಾಡುತ್ತೀರಾ?” ಎಂದು ಚುನಾವಣಾ ಸಮಿತಿ ದಾಖಲೆಗಳನ್ನು ಲಗತ್ತಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಕರ್ನಾಟಕ ಲೋಕಸಭಾ 2024ರ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಒಂದೇ ಒಂದು ಮೇಲ್ಮನವಿ ಸಲ್ಲಿಸಿಲ್ಲ ಎಂದು ಇಸಿಐ ವಕ್ತಾರರು ಹೇಳಿದ್ದಾರೆ.