CET ಪರೀಕ್ಷೆಗೆ ಪಠ್ಯೇತರ ಪ್ರಶ್ನೆಗಳು ಮರುಕಳಿಸದಂತೆ ಎಚ್ಚರ ವಹಿಸಿ : ಹೈಕೋರ್ಟ್

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಪಠ್ಯೇತರವಾಗಿ ಆಯ್ಕೆ ಮಾಡಿಕೊಂಡಿದ್ದ ಪ್ರಶ್ನೆಗಳ ಕುರಿತಂತೆ ಪರಿಶೀಲಿಸಲು ಸರ್ಕಾರ ರಚನೆ ಮಾಡಿದ್ದ ಸಮಿತಿ ಕುರಿತಂತೆ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದೆ. ಅಲ್ಲದೇ, ಮಕ್ಕಳ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಈ ರೀತಿಯಲ್ಲಿ ಗೊಂದಲಗಳಾಗದಂತೆ ಮತ್ತು ಮರುಕಳಿಸದಂತೆ ಎಚ್ಚರ ವಹಿಸಲು ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಗೆ ನಿರ್ದೇಶನ ನೀಡಿದೆ.

ಬೆಂಗಳೂರಿನ ದಾಸರಹಳ್ಳಿ ನಿವಾಸಿ ತನ್ಮಯ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರ ವಿದ್ಯಾರ್ಥಿ, ”ತಾನು ದ್ವಿತೀಯ ಪಿಯುಸಿ ಸಿಬಿಎಸ್ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡಿದ್ದು, ಈ ಬಾರಿ ನಡೆದ ಸಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿಯಾದ ನನಗೆ ಅನೇಕ ರೀತಿಯಲ್ಲಿ ಗೊಂದಲ ಉಂಟಾಗಿದೆ.

ಪಠ್ಯೇತರ ಪ್ರಶ್ನೆಗಳನ್ನು ರ‍್ಯಾಂಕ್ ಪ್ರಕಟಣೆ ವೇಳೆ ಪರಿಗಣಿಸುವುದಿಲ್ಲ ಎಂಬ ಅಂಶ ಪರೀಕ್ಷೆಗೂ ಮುನ್ನ ತಿಳಿದಿದ್ದರೆ, ಆ ಪ್ರಶ್ನೆಗಳಿಗೆ ನೀಡುವ ಸಮಯವನ್ನು ಇತರ ಪ್ರಶ್ನೆಗಳಿಗೆ ಉತ್ತರಿಸಲು ವಿನಿಯೋಗಿಸುತ್ತಿದ್ದೆ. ನಾಲ್ಕು ವಿಷಯಗಳಲ್ಲಿ ಪಠ್ಯೇತರ ಪ್ರಶ್ನೆಗಳು ಪ್ರಮುಖವಾದವು ಎಂಬುದಾಗಿ ತಿಳಿಸಿ ಅವುಗಳನ್ನು ಉತ್ತರಿಸಲು ಸಾಕಷ್ಟು ಸಮಯ ವ್ಯರ್ಥ ಮಾಡಲಾಗಿದೆ. ಸಿಎಟಿ ಪರೀಕ್ಷೆಯಲ್ಲಿ ಕೇಳಲಾದ 180 ಪ್ರಶ್ನೆಗಳನ್ನು ಒಳಗೊಂಡಂತೆ ಸಿದ್ಧಪಡಿಸಿದ ರ‍್ಯಾಂಕ್ ಪಟ್ಟಿಯನ್ನು ಆಧರಿಸಿ ಎಂಜಿನಿಯರಿಂಗ್ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲು ಕೆಇಎಗೆ ನಿರ್ದೇಶನ ನೀಡಬೇಕು. ಪಿಯುಸಿ ಪತ್ರಿಕೆಗಳಿಗಿಂತ ಸಿಬಿಎಸ್ ಈ ಪತ್ರಿಕೆಗಳ ಕಷ್ಟದ ಮಟ್ಟವನ್ನು ಪರಿಗಣಿಸಿ ರ‍್ಯಾಂಕ್ ಪರಿಗಣಿಸಲು ಸೂಚನೆ ನೀಡಬೇಕು” ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ, ”ಸಿಇಟಿ ಪರೀಕ್ಷೆಗೂ ಮುನ್ನ ಪಠ್ಯಕ್ರಮವನ್ನು ತಿಳಿಸಲಾಗಿತ್ತು, ಇದೀಗ ಪಠ್ಯಕ್ರಮದಿಂದ ಹೊರಗಿದ್ದ ಪ್ರಶ್ನೆಗಳನ್ನು ಪರಿಶೀಲನೆ ನಡೆಸುವುದಕ್ಕಾಗಿ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದ್ದು, ಅದರಿಂದ 50 ಪ್ರಶ್ನೆಗಳನ್ನು ಪಠ್ಯಕ್ರಮದಿಂದ ಹೊರಭಾಗದಿಂದ ತೆಗೆದುಕೊಂಡಿರುವ ಅಂಶ ಗೊತ್ತಾಗಿದೆ. ಇದರಿಂದಾಗಿ ಪಠ್ಯೇತರ ಪ್ರಶ್ನೆಗಳನ್ನು ರ‍್ಯಾಂಕಿಂಗ್ ಪ್ರಕಟಿಸುವಲ್ಲಿ ಕೈಬಿಡಲು ನಿರ್ಧರಿಸಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

Leave a Reply

Your email address will not be published. Required fields are marked *