ಬೆಳಗಾವಿ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು, ಫೋನ್ ಮಾಡಿ ಸರ್ಕಾರಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಿಯನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಅರವಿಂದ ಅರಗೊಂಡ ಬಂಧಿತ ಆರೋಪಿ.
ಬೆಳಗಾವಿಯ ಕೊಲ್ಹಾಪುರ ಸರ್ಕಲ್ನಲ್ಲಿ ಆಫೀಸ್ ಮಾಡಿಕೊಂಡಿದ್ದ ಆರೋಪಿ, ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನೆ ಟಾರ್ಗೆಟ್ ಮಾಡುತ್ತಿದ್ದ. ಬೆಳಗಾವಿಯಲ್ಲಿ ಸುಮಾರು 10 ಜನರಿಂದ ಬರೋಬ್ಬರಿ 1 ಕೋಟಿ 8 ಲಕ್ಷ ರೂ. ಹಣವನ್ನು ಪಡೆದಿದ್ದ. ಬೆಳಗಾವಿಯಲ್ಲಿ ಅಷ್ಟೇ ಅಲ್ಲದೇ ಮುಂಬೈನಲ್ಲೂ ಬ್ರಾಂಚ್ ಓಪನ್ ಮಾಡಿದ್ದ ಖದೀಮ ನೀಟ್ ಪರೀಕ್ಷೆ ಬರೆದು ಕಡಿಮೆ ಅಂಕ ಪಡೆದವರನ್ನು ಗುರುತಿಸಿ ಅವರಿಗೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟ್ ಕೊಡುವುದಾಗಿ ನಂಬಿಸಿದ್ದ.
ಡ್ರೈವರ್ ಮೊಬೈಲ್ ಟ್ರೇಸ್ ಮಾಡಿದ್ದರಿಂದ ವಂಚಕ ಸಿಕ್ಕಿ ಬಿದ್ದಿದ್ದಾನೆ. ಮುಂಬೈಗೆ ಹೋಗಿ ಆರೋಪಿಯನ್ನು ಬಂಧಿಸಿ ಬೆಳಗಾವಿಗೆ ಪೊಲೀಸರು ಕರೆ ತಂದಿದ್ದರು. ಸದ್ಯ ಆರೋಪಿ ಅರವಿಂದ ಅರಗೊಂಡ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈತನಿಂದ 12 ಲಕ್ಷ ನಗದು, 15 ಕಂಪ್ಯೂಟರ್, 1 ಲ್ಯಾಪಟಾಪ್ ಸೇರಿ ಒಟ್ಟು 12,66,900 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.