ಬೆಳಗಾವಿ ಗಣೇಶೋತ್ಸವಕ್ಕಿದೆ ಶತಮಾನದ ನಂಟು : ಮುಗಿಲು ಮುಟ್ಟಿದ ಸಂಭ್ರಮ

ಸಾರ್ವಜನಿಕ ಗಣೇಶೋತ್ಸವ

ಬೆಳಗಾವಿ: ಇಡೀ ರಾಜ್ಯದಲ್ಲೇ ಸಾರ್ವಜನಿಕವಾಗಿ ಗಣೇಶೋತ್ಸವ ಆರಂಭ ಆಗಿರೋದು ಗಡಿನಾಡು ಬೆಳಗಾವಿಯಲ್ಲಿ. ಇದಕ್ಕೆ ಅದರದ್ದೇಯಾದ ಇತಿಹಾಸವೂ ಉಂಟು. ಸ್ವತಃ ಲೋಕಮಾನ್ಯ ಬಾಲಗಂಗಾಧರ ತಿಲಕರು ಇಲ್ಲಿಗೆ ಬಂದು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಶ್ರೇಯಸ್ಸು ಬೆಳಗಾವಿಗಿದೆ. ಅಂದು ಆರಂಭವಾದ ಈ ಉತ್ಸವ ಇಂದು ಹೆಮ್ಮರವಾಗಿ ಬೆಳೆದಿದ್ದು, ಕುಂದಾನಗರಿಯ ಗಲ್ಲಿ ಗಲ್ಲಿಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ಗಣೇಶ ಭಕ್ತರು ಸಂಭ್ರಮಿಸುತ್ತಿದ್ದಾರೆ.

ಹೌದು, ಕುಂದಾನಗರಿ ಬೆಳಗಾವಿಯಲ್ಲಿ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಗಲ್ಲಿ ಗಲ್ಲಿಯಲ್ಲಿಯೂ ಗಣೇಶ ಮೂರ್ತಿಗಳ ದರ್ಬಾರ್ ಜೋರಾಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಚಿಕ್ಕ ಚಿಕ್ಕ ಮೂರ್ತಿ ಸೇರಿ ದೊಡ್ಡ ದೊಡ್ಡ ಮೂರ್ತಿಗಳ ಪ್ರತಿಷ್ಠಾಪನೆ ಮಾಡಿ ಗಣೇಶನ ಆರಾಧನೆ ಮಾಡುತ್ತಿದ್ದಾರೆ. ಬಾಜಾಭಜಂತ್ರಿ, ವಾದ್ಯ ಮೇಳಗಳನ್ನು ಬಾರಿಸುತ್ತಾ, ಪಟಾಕಿ ಸಿಡಿಸಿ ಗಣಪನನ್ನು ಭಕ್ತರು ಮನೆಗೆ ಕರೆದೊಯ್ಯುತ್ತಿರುವುದು ಸಾಮಾನ್ಯವಾಗಿತ್ತು.

1905ರಲ್ಲಿ ಬೆಳಗಾವಿಯ ಝೇಂಡಾ ಚೌಕ್​ನಲ್ಲಿ ಬಾಲಗಂಗಾಧರ ತಿಲಕರಿಂದ ಕರ್ನಾಟಕದಲ್ಲಿ ಮೊಟ್ಟ ಮೊದಲ ಮತ್ತು ದೇಶದ ಎರಡನೇ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಆಗುತ್ತದೆ. ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಗಣೇಶೋತ್ಸವಕ್ಕೆ ಅಂದು ಚಾಲನೆ ನೀಡಲಾಗಿತ್ತು. ಆ ಪರಂಪರೆ 120 ವರ್ಷಗಳ ನಂತರವೂ ಮುಂದುವರಿದಿದೆ. ಬೆಳಗಾವಿಯಲ್ಲಿ ಅಂದು 1 ಗಣೇಶ ಮಂಡಳಿ ಇದ್ದಿದ್ದು, ಇಂದು‌ 390ಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳು ಗಣೇಶನನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುತ್ತಿದ್ದಾರೆ. ಜಿಲ್ಲಾದ್ಯಂತ 1200ಕ್ಕೂ ಅಧಿಕ ಸಾರ್ವಜನಿಕ ಮಂಡಳಿಗಳು ಬೃಹದಾಕಾರದ, ಭವ್ಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿವೆ.

11 ದಿನಗಳ ಕಾಲ ಸಾರ್ವಜನಿಕ ಗಣೇಶ ಮೂರ್ತಿಗಳ ವೀಕ್ಷಣೆಗೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. 11ನೇ ದಿನ‌ ಮೂರ್ತಿಗಳ ನಿಮಜ್ಜನ ಮೆರವಣಿಗೆ ಅದ್ಧೂರಿಯಾಗಿ ನೆರವೇರಲಿದ್ದು, ಲಕ್ಷಾಂತರ ಜನ ಭಾಗವಹಿಸುತ್ತಾರೆ. ಮೂರ್ತಿಗಳ ನಿಮಜ್ಜನಕ್ಕೆ ಕಪಿಲೇಶ್ವರದ ಎರಡು ಹೊಂಡ, ಜಕ್ಕೇರಿ ಹೊಂಡ ಸೇರಿದಂತೆ ನಗರದಲ್ಲಿನ 9 ಹೊಂಡಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಹಾನಗರ ಪಾಲಿಕೆ ಸಂಚಾರಿ ವಾಹನಗಳಲ್ಲೂ ಮೂರ್ತಿಗಳನ್ನು ನಿಮಜ್ಜನ ಮಾಡಬಹುದಾಗಿದೆ.

Leave a Reply

Your email address will not be published. Required fields are marked *