ಬೆಳಗಾವಿ: ಮಕ್ಕಳ ಮಾರಾಟ ಜಾಲದ ಐವರ ಬಂಧನ

ಬೆಳಗಾವಿ: ಖತರ್ನಾಕ್ ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಆರ್‌ಎಂಪಿ ವೈದ್ಯ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಮಾಳಮಾರುತಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ.

ಪ್ರಕರಣ ಸಂಬಂಧ ಕಿಂಗ್ ಪಿನ್​ಗಳಾದ ಕಿತ್ತೂರಿ‌ನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಮತ್ತು ಪ್ರವೀಣ್ ಎಂಬುವರನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಮಕ್ಕಳ ಮಾರಾಟದಲ್ಲಿ ಫುಲ್ ಆಕ್ಟಿವ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೂ ಮುನ್ನ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಬೇಕು ಎನ್ನುವವರೇ ಇವರ ಟಾರ್ಗೆಟ್ ಆಗಿದ್ದರು. 7-8 ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ, ಮಗು ರಕ್ಷಿಸಿ ತಾವೇ ಸಾಕುವುದಾಗಿ ನಂಬಿಸುವ ಮೂಲಕ ಅವರನ್ನು ಕಳಿಸುತ್ತಿದ್ದರು. ಆರ್‌ಎಂಪಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎರಡ್ಮೂರು ತಿಂಗಳು ಆ ಶಿಶುಗಳನ್ನು ಆರೈಕೆ ಮಾಡುತ್ತಿದ್ದರು. ಹೀಗೆ ಆರೈಕೆ ಮಾಡಿದ ಮಗುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಮಕ್ಕಳಿಲ್ಲದವರಿಗೆ ರೂ. 60 ಸಾವಿರದಿಂದ ಒಂದೂವರೆ ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಆರೋಪಿ ಖೆಡ್ಡಾಗೆ ಬಿದ್ದಿದ್ದು ಹೀಗೆ: ಈ ಬಗ್ಗೆ ಮಕ್ಕಳ ರಕ್ಷಣಾ ಇಲಾಖೆಗೆ ಗೊತ್ತಾಗುತ್ತಿದ್ದಂತೆ ಮಕ್ಕಳ ಮಾರಾಟ ಜಾಲದ ಆರೋಪಿ ಮಹಾದೇವಿ ಜೈನ್​ಗೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ನಮಗೆ ಮಗು ಬೇಕಾಗಿದೆ ಎಂದು‌ ಹೇಳಿದ್ದನ್ನು ನಂಬಿದ ಆರೋಪಿ, 1 ಲಕ್ಷದ 40 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಒಪ್ಪಿ, ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಗು ತರುವಂತೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಮಗುವಿನ ಜೊತೆಗೆ ಬಂದ ಮಹಾದೇವಿ ಹಾಗೂ ಗ್ಯಾಂಗ್ ಅಧಿಕಾರಿಗಳ ಬಲೆಗೆ ಬಿದ್ದಿದೆ. ಕಿಂಗ್ ಪಿನ್ ವೈದ್ಯ ಅಬ್ದುಲ್ ಗಫಾರ್ ಖಾನ್​ನಿಂದ 60 ಸಾವಿರ ರೂ.ಗೆ ಮಗುವನ್ನು ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್ ಖರೀದಿ ಮಾಡಿದ್ದರು. ಬಳಿಕ 1 ಲಕ್ಷ 40 ಸಾವಿರ ರೂ. ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಖೆಡ್ಡಾಕ್ಕೆ ಬಿದ್ದಿದ್ದಾರೆ.

Leave a Reply

Your email address will not be published. Required fields are marked *