ಬೆಳಗಾವಿ: ಕಬ್ಬಿಗೆ ದರ ನಿಗದಿಗೆ ಆಗ್ರಹಿಸಿ ಕಳೆದ 8 ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ನಾಯಕರು ಮಾತ್ರ ಫುಲ್ ಸೈಲೆಂಟ್ ಆಗಿದ್ದಾರೆ. ವಿಪಕ್ಷ, ಆಡಳಿತ ಪಕ್ಷದ ಜನಪ್ರತಿನಿಧಿಗಳು ಜಿಲ್ಲೆಯಲ್ಲಿಯೇ ಇದ್ದರೂ ಕಂಡೂ ಕಾಣದಂತೆ ಓಡಾಡಿಕೊಂಡಿದ್ದಾರೆ.
ಎರಡೆರಡು ಸಕ್ಕರೆ ಕಾರ್ಖಾನೆ ಹೊಂದಿರುವ ಸಚಿವ ಸತೀಶ್ ಗಪ್ಚುಪ್ ಆಗಿದ್ದರೆ ಇತ್ತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹ ಸೈಲೆಂಟ್ ಮೂಡ್ಗೆ ಜಾರಿದ್ದಾರೆ. ಲಕ್ಷ್ಮಣ ಸವದಿ, ರಮೇಶ್ ಕತ್ತಿ, ಪ್ರಭಾಕರ್ ಕೋರೆ, ಜಾರಕಿಹೊಳಿ ಬ್ರದರ್ಸ್, ಜೊಲ್ಲೆ ಸೇರಿ ಘಟಾನುಘಟಿ ನಾಯಕರೆಲ್ಲ ಮೌನವಾಗಿರೋದು ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ನಡೆಯುವ ಸಣ್ಣ ಬ್ಯಾಂಕ್ ಚುನಾವಣೆಗೆ ಒಂದಾಗುವ ನಾಯಕರು, ರೈತರ ವಿಚಾರದಲ್ಲಿ ಡೋಂಟ್ಕೇರ್ ಮನಸ್ಥಿತಿ ಹೊಂದಿದ್ದಾರೆ ಎಂದು ಅನ್ನದಾತರು ಕಿಡಿ ಕಾರಿದ್ದಾರೆ.
ಬೆಳಗಾವಿಯಲ್ಲಿ ಗೌಪ್ಯ ಸಭೆ ನಡೆಸಿದ ಸಕ್ಕರೆ ಸಚಿವರು
ಕಬ್ಬು ಬೆಳೆಗಾರರ ಹೋರಾಟದಿಂದ ಕೊನೆಗೂ ಎಚ್ಚೆತ್ತ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಹುಬ್ಬಳ್ಳಿಯಿಂದ ಬೆಳಗಾವಿಗೆ ಆಗಮಿಸಿದ್ದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಜೊತೆ ದಿಢೀರ್ ಸಭೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ನಿರ್ದೇಶನದಂತೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಗೌಪ್ಯ ಮೀಟಿಂಗ್ ನಡೆಸಿದ್ದಾರೆ. ಸಭೆ ಬಳಿಕ ಈ ಬಗ್ಗೆ ಸಿಎಂಗೆ ಕರೆ ಮಾಡಿರುವ ಸಚಿವರು, ಸಕ್ಕರೆ ಕಾರ್ಖಾನೆಯವರು ಹೆಚ್ಚುವರಿ ಹಣ ಕೊಡಲು ಒಪ್ಪುತ್ತಿಲ್ಲ. ಈಗ ಕೊಡುತ್ತಿರೋದೇ ಹೆಚ್ಚು ಅಂತಾ ಹೇಳ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ವೇಳೆ ಸಚಿವರ ಮಾತಿಗೆ ಸಿಎಂ ಗರಂ ಆಗಿದ್ದು, ರೈತರನ್ನ ಮನವೊಲಿಸಿ ಸರಿಮಾಡಿ ಬರಲು ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ರೈತರ ಆಕ್ರೋಶ ಭುಗಿಲೇಳುವ ಸಾಧ್ಯತೆ ಹಿನ್ನಲೆ ಪ್ರತಿಭಟನಾ ಸ್ಥಳಕ್ಕೆ ತೆರಳದೇ ಇರಲು ಶಿವಾನಂದ ಪಾಟೀಲ್ ಅವರಿಗೆ ಸಿಎಂ ಸಲಹೆ ನೀಡಿದ್ದಾರೆ.
For More Updates Join our WhatsApp Group :

