ಗನ್ಮ್ಯಾನ್ ಗುರುಚರಣ್ ಸಿಂಗ್ ಹೊರತುಪಡಿಸಿ ಆದೇಶ.
ಬೆಂಗಳೂರು : ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಪ್ರಕರಣ ನಿತ್ಯ ಒಂದಿಲ್ಲೊಂದು ತಿರುವು ಪಡೆದುಕೊಳ್ಳುತ್ತಿದೆ. ದಿನಕ್ಕೊಂದು ವಿಡಿಯೋಗಳು ಹೊರಬರುತ್ತಿವೆ. ಪೊಲೀಸರು ಕೂಡ ತನಿಖೆಯನ್ನ ತೀವ್ರಗೊಳಿಸಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಮ್ ನಂಬರ್ 4ರಲ್ಲಿನ 25 ಆರೋಪಿಗಳಿಗೆ ಜಾಮೀನು (bail) ನೀಡಿ ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.
25 ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು
ಬಳ್ಳಾರಿಯ ಬ್ರೂಸ್ಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಖಾಸಗಿ ಗನ್ ಮ್ಯಾನ್ ಗುರುಚರಣ್ ಸಿಂಗ್ಗೆ ಸಂಬಂಧಿಸಿದ ಗನ್ನಿಂದಲೇ 12 ಎಂಎಂ ಬುಲೆಟ್ ಫೈರ್ ಮಾಡಿದ್ದಾನೆ. ಹೀಗಾಗಿ ಗುರುಚರಣ್ ಸಿಂಗ್ ಹೊರತು ಪಡಿಸಿ ಕ್ರೈಮ್ ನಂಬರ್ 4ರಲ್ಲಿನ 25 ಬಂಧಿತ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಬಳ್ಳಾರಿ ಬ್ಯಾನರ್ ಗಲಾಟೆ ಸಂಬಂಧ ಬ್ರೂಸ್ಪೇಟೆ ಠಾಣೆಯಲ್ಲಿ ಒಟ್ಟು 6 ಪ್ರಕರಣ ದಾಖಲಾಗಿವೆ. ಗನ್ಮ್ಯಾನ್ಗಳಾದ ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಸೇರಿದಂತೆ ಕಾಂಗ್ರೆಸ್ನ 10, ಬಿಜೆಪಿಯ 11 ಕಾರ್ಯಕರ್ತರು ಸೇರಿದಂತೆ ಒಟ್ಟು 26 ಜನರನ್ನು ಪೊಲೀಸರು ಬಂಧಿಸಿದ್ದರು.
ಜನವರಿ 05ರಂದು ಪ್ರಮುಖ ಆರೋಪಿ ಗುರುಚರಣ್ ಸಿಂಗ್ ಸೇರಿ 26 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದೇಶ ಬೆನ್ನಲ್ಲೇ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದರು.
ಇನ್ನು ಬಳ್ಳಾರಿ ಬ್ಯಾನರ್ ಘರ್ಷಣೆ ವಿಚಾರವಾಗಿ ದಿನಕ್ಕೊಂದು ವಿಡಿಯೋ ಬಯಲಾಗುತ್ತಿವೆ. ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಬ್ಯಾನರ್ ಗಲಭೆಯ ಮತ್ತಷ್ಟು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಅಂತ್ಯಕ್ರಿಯೆ ವೇಳೆ ಸ್ಮಶಾನದಲ್ಲಿನ ವ್ಯಕ್ತಿಯೊಬ್ಬ ಮೊದಲು ಮಣ್ಣು ಮಾಡಲು ಗುಂಡಿ ತೋಡಿ, ಆ ಬಳಿಕ ಮೃತದೇಹ ಸುಡಲಾಗುತ್ತೆ ಅನ್ನೋ ವಿಡಿಯೋ ರಿಲೀಸ್ ಮಾಡಿದ್ದಾರೆ.
For More Updates Join our WhatsApp Group :




