ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚಾಗುತ್ತಿರುವ ಅಪಘಾತಗಳಿಗೆ ಹೆಚ್ಚಾಗಿ ಪಾನಮತ್ತ ಚಾಲನೆ ಕಾರಣವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಡ್ರಂಕ್ ಡ್ರೈವ್ ತಪಾಸಣೆ ಆರಂಭಿಸಿರುವ ಸಂಚಾರ ಪೊಲೀಸರು ಶುಕ್ರವಾರ ಒಂದೇ ದಿನದಲ್ಲಿ 779 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕುಡಿದು ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗುತ್ತಿರುವುದು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವುದಾಗಿ ಪೊಲೀಸರು ಹೇಳಿದ್ದರು. ಇದರಂತೆ ಶುಕ್ರವಾರ ಕುಡಿದು ವಾಹನ ಚಲಾಯಿಸಿದವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದರು.
ನಗರದೆಲ್ಲೆಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆಗಾಗಿ 1,200 ಪೊಲೀಸ್ ಸಿಬ್ಬಂದಿಯಿಂದ 34,676 ವಾಹನ ಚಾಲಕರ ತಪಾಸಣೆ ಮಾಡಲಾಗಿದೆ. ಎಂಜಿ ರಸ್ತೆ, ಹೆಬ್ಬಾಳ, ಇಂದಿರಾನಗರ, ಕೋರಮಂಗಲ, ಮಲ್ಲೇಶ್ವರ, ಉಪ್ಪಾರಪೇಟೆ ಸೇರಿದಂತೆ ನಗರದದ್ಯಾಂತ ತಪಾಸಣೆ ನಡೆಸಿದ್ದಾರೆ. ಈ ಪೈಕಿ 779 ಮಂದಿ ಮದ್ಯ ಸೇವಿಸಿ ವಾಹನ ಚಾಲನೆ ಪತ್ತೆಯಾಗಿದೆ. ಒಂದೇ ರಾತ್ರಿಯಲ್ಲಿ ದಾಖಲೆಯ 779 ಡ್ರಂಕ್ & ಡ್ರೈವ್ ಕೇಸ್ ರಿಜಿಸ್ಟರ್ ಆಗಿದ್ದು, 7.79 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಲಾಗಿದೆ.