ಬೆಂಗಳೂರು ಮೂಲಸೌಕರ್ಯ ವಿವಾದ: ನಾರಾ ಲೋಕೇಶ್ ಟ್ವೀಟ್‌ಗೆ ಪ್ರಿಯಾಂಕ್ ಖರ್ಗೆಯಿಂದ ಮುಟ್ಟಿನೋಡುವ ಟಾಂಗ್!

ಬೆಂಗಳೂರು ಮೂಲಸೌಕರ್ಯ ವಿವಾದ: ನಾರಾ ಲೋಕೇಶ್ ಟ್ವೀಟ್‌ಗೆ ಪ್ರಿಯಾಂಕ್ ಖರ್ಗೆಯಿಂದ ಮುಟ್ಟಿನೋಡುವ ಟಾಂಗ್!

ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿ, ಮೂಲಸೌಕರ್ಯ ಕೊರತೆ ಬಗ್ಗೆ ಐಟಿ ಕಂಪನಿಗಳು ಇತ್ತೀಚೆಗೆ ಧ್ವನಿ ಎತ್ತಿದ್​ದಾಗ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರ ರಾಜ್ಯಕ್ಕೆ ಬರುವಂತೆ ಕಂಪನಿಗಳಿಗೆ ಕರೆ ನೀಡಿದ್ದರು. ಬ್ಲಾಕ್ ಬಕ್ ಕಂಪನಿ ಸಿಇಓ ರಾಜೇಶ್ ಯಾಬಾಜಿ, ಉದ್ಯಮಿ ಮೋಹನ್​ದಾಸ್ ಪೈ ಟ್ವೀಟ್ ಮಾಡಿದ್ದು ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು. ನಂತರ ತಕ್ಷಣದ ಕ್ರಮಗಳನ್ನು ಕೈಗೊಂಡಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ, ರಸ್ತೆಗುಂಡಿಗಳನ್ನು ಮುಚ್ಚಲು ಹಾಗೂ ಐಟಿ ಕಂಪನಿಗಳಿಗೆ ಮೂಲಸೌರ್ಯ ನೀಡುವ ವಿಚಾರದಲ್ಲಿ ಭರವಸೆ ನೀಡಿತ್ತು. ಅದಾದ ನಂತರ, ಬೆಂಗಳೂರು ತೊರೆಯುವುದಿಲ್ಲ ಎಂದು ರಾಜೇಶ್ ಯಾಬಾಜಿ ಸ್ಪಷ್ಟಪಡಿಸಿದ್ದರು. ಆದರೆ, ಬೆಂಗಳೂರಿನ ಮೂಲಸೌಕರ್ಯ ವಿಚಾರಕ್ಕೆ ಸಂಬಂಧಿಸಿದ ಚರ್ಚೆ ಅಷ್ಟಕ್ಕೇ ಮುಗಿಯುತ್ತಿರುವಂತೆ ಕಾಣಿಸುತ್ತಿಲ್ಲ. ಇದೀಗ ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಮತ್ತೆ ಟ್ವೀಟ್ ಮಾಡಿದ್ದು, ಅದಕ್ಕೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತುಸು ಖಾರವಾಗಿಯೇ ತಿರುಗೇಟು ನೀಡಿದ್ದಾರೆ.

ನಾರಾ ಲೋಕೇಶ್ ಟ್ವೀಟ್​​ನಲ್ಲೇನಿದೆ?

ಹದಗೆಡುತ್ತಿರುವ ಹೊರ ವರ್ತುಲ ರಸ್ತೆಯಿಂದ ಹೆಚ್ಚಿನ ಸ್ಟಾರ್ಟ್ಅಪ್‌ಗಳು, ಸಂಸ್ಥೆಗಳು ಉತ್ತರ ಬೆಂಗಳೂರು, ವೈಟ್‌ಫೀಲ್ಡ್ ಕಡೆಗೆ ಮುಖಮಾಡುತ್ತಿವೆ ಎಂದು ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬ ಎಕ್ಸ್ ಹ್ಯಾಂಡಲ್​​ನಲ್ಲಿ ಪೋಸ್ಟ್ ಮಾಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ನಾರಾ ಲೋಕೇಶ್, ‘ಹೌದು ಉತ್ತರದ ಕಡೆಗೆ ಸ್ವಲ್ಪ ಚೆನ್ನಾಗಿದೆ. ಇನ್ನೂ ಸ್ವಲ್ಪ ಉತ್ತರಕ್ಕೆ ಬಂದರೆ ಅನಂತಪುರದಲ್ಲಿ ಚೆನ್ನಾಗಿದೆ. ಅಲ್ಲಿ ನಾವು ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕೋಸಿಸ್ಟಂ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ನಾರಾ ಲೋಕೇಶ್​ಗೆ ಮುಟ್ಟಿನೋಡುವಂಥ ತಿರುಗೇಟು ಕೊಟ್ಟ ಪ್ರಿಯಾಂಕ್ ಖರ್ಗೆ

ನಾರಾ ಲೋಕೇಶ್ ಎಕ್ಸ್ ಸಂದೇಶಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ದುರ್ಬಲ ವ್ಯವಸ್ಥೆ ಇರುವವರು ಅದನ್ನು ಸುಧಾರಿಸಲು ಪ್ರಯತ್ನಿಸುವುದು ಸಾಮಾನ್ಯ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಆ ಪ್ರಯತ್ನ ತೀವ್ರ ಹತಾಶೆಯ ಹಂತಕ್ಕೆ ಹೋದಾಗ ಅದು ಮತ್ತಷ್ಟು ದುರ್ಬಲವೇ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಿಯಾಂಕ್ ಖರ್ಗೆ ಎಕ್ಸ್ ಸಂದೇಶ

ಇಷ್ಟೇ ಅಲ್ಲದೆ, ಬೆಂಗಳೂರಿನ ಸಾಧನೆಗಳ ಬಗ್ಗೆಯೂ ಪ್ರಿಯಾಂಕ್ ಖರ್ಗೆ ಪಟ್ಟಿಮಾಡಿದ್ದಾರೆ. ಬೆಂಗಳೂರಿನಲ್ಲಿ 2035 ರವರೆಗೆ ಶೇ 8.5 ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. 2025 ರಲ್ಲಿ ಆಸ್ತಿ ಬೆಲೆಯಲ್ಲಿ ಶೇಕಡಾ 5 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ.

ನಗರೀಕರಣ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯ ವೇಗಕ್ಕಾಗಿ ಜಾಗತಿಕ ಸೂಚ್ಯಂಕಗಳಲ್ಲಿ ಉನ್ನತ ಶ್ರೇಯಾಂಕಗಳನ್ನು ಬೆಂಗಳೂರು ಪಡೆದಿದೆ. 2025ರ ವೇಳೆಗೆ ಅಂದಾಜು 14.4 ದಶಲಕ್ಷ ಜನಸಂಖ್ಯೆ ಇದ್ದು, ವಾರ್ಷಿಕ ಶೇ 2.76 ರ ದರದಲ್ಲಿ ಬೆಳೆಯುತ್ತಿದೆ. ಇದು ಭಾರತದ ಪ್ರಮುಖ ವಲಸೆ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಸಿದ್ದಾರೆ. ಅಲ್ಲದೆ, ಇನ್ನೊಂದು ಜೀವಿಯಿಂದ ಪೋಷಕಾಂಶಗಳನ್ನು ಹೀರಿಕೊಂಡು ಬದುಕುವ ಜೀವಿಯನ್ನು ಏನೆಂದು ಕರೆಯುತ್ತಾರೆ ಎಂದು ಪ್ರಶ್ನಿಸುವ ಮೂಲಕ ನಾರಾ ಲೋಕೇಶ್​ಗೆ ಟಾಂಗ್ ಕೊಟ್ಟಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *