ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿದೆ.
ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾ.ಸೂರ್ಯ ಕಾಂತ್ ದ್ವಿಸದಸ್ಯ ನ್ಯಾಯಪೀಠ 10 ಲಕ್ಷ ರೂ ಬಾಂಡ್, 2 ಶ್ಯೂರಿಟಿಗಳೊಂದಿಗೆ ಕೇಜ್ರಿವಾಲ್ಗೆ ಜಾಮೀನು ಮಂಜೂರು ಮಾಡಿದೆ.
ದೆಹಲಿ ಮದ್ಯ ನೀತಿ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಈಗಾಗಲೇ ಜಾಮೀನು ಸಿಕ್ಕಿರುವುದರಿಂದ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಅಭಿಪ್ರಾಯಟ್ಟಿತು.
ಕೇಜ್ರಿವಾಲ್ ಬಂಧನ ನ್ಯಾಯಸಮ್ಮತವಲ್ಲ. ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್ನಲ್ಲಿದ್ದ ಆಪ್ ನಾಯಕರಾದ ಮನಿಶ್ ಸಿಸೋಡಿಯಾ ಮತ್ತು ಅತಿಶಿ ಅವರು ಜಾಮೀನು ಸಿಗುತ್ತಿದ್ದಂತೆ ಪರಸ್ಪರ ಸಂಭ್ರಮಿಸಿದರು.
ಕೇಜ್ರಿವಾಲ್‌ರನ್ನು ಮೊದಲು ಮಾರ್ಚ್ನಲ್ಲಿ ಇಡಿ ಬಂಧಿಸಿತ್ತು. ಎರಡು ತಿಂಗಳ ಹಿಂದೆ ಇಡಿ ಪ್ರಕರಣದಲ್ಲಿ ಕೋರ್ಟ್ ಜಾಮೀನು ನೀಡಿತ್ತು. ಆದರೆ ಜುಲೈ 12ರಂದು ಸಿಬಿಐ ಬಂಧಿಸಿದ್ದರಿಂದ ಕೇಜ್ರಿವಾಲ್ಗೆ ಜೈಲು ವಾಸ ಮುಂದುವರಿದಿತ್ತು. ಇದೀಗ ಆರು ತಿಂಗಳ ಬಳಿಕ ದೆಹಲಿ ಸಿಎಂ ಬಿಡುಗಡೆಯಾಗುತ್ತಿದ್ದಾರೆ.