ಬೆಂಗಳೂರು: ವೈದ್ಯ ಡಾ. ಮಹೇಂದ್ರ ರೆಡ್ಡಿ ಎಂಬಾತ ತನ್ನ ಪತ್ನಿಯನ್ನೇ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ವಿಚಾರ 6 ತಿಂಗಳ ನಂತರ ಬಯಲಾಗಿದ್ದು, ಸದ್ಯ ಆರೋಪಿ ಬೆಂಗಳೂರಿನ ಮಾರತಹಳ್ಳಿ ಪೊಲೀಸರ ವಶವಾಗಿದ್ದಾನೆ. ಮೃತ ಡಾ.ಕೃತಿಕಾ ರೆಡ್ಡಿಗೆ ಅನಾರೋಗ್ಯವಿತ್ತು. ಅದನ್ನು ಮುಚ್ಚಿಟ್ಟು ವಿವಾಹ ಮಾಡಿದ ಕಾರಣಕ್ಕೆ ಡಾ. ಮಹೇಂದ್ರ ರೆಡ್ಡಿ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೆ, ಈ ಕೊಲೆ ಪ್ರಕರಣ ಸಂಬಂಧ ಇದೀಗ ಸ್ಟೋಟಕ ಮಾಹಿತಿ ಹೊರಬಿದ್ದಿದೆ. ಪ್ರಕರಣದ ಕುರಿತು ಕೃತಿಕಾ ಸಹೋದರಿ ಡಾ. ನಿಖಿತಾ ಅವರು ‘ಟಿವಿ9’ ಜತೆ ಮಾತನಾಡಿದ್ದು, ಅಕ್ಕನ ಸಾವಿಗೆ ಪತಿ ಮಹೇಂದ್ರನೇ ಕಾರಣ. ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ.
ಡಾ. ಮಹೇಂದ್ರ ರೆಡ್ಡಿಗೆ ಅನೈತಿಕ ಸಂಬಂಧ ಇತ್ತು: ಡಾ. ನಿಖಿತಾ ಆರೋಪ
ಕೃತಿಕಾ ಮೃತಪಟ್ಟ ದಿನವೇ ನಮಗೆ ಅನುಮಾನ ಬಂದಿತ್ತು. ಆಗಲೇ ಪೋಸ್ಟ್‌ಮಾರ್ಟಂ ಮಾಡಬೇಕು ಎಂದು ನಾವು ಒತ್ತಾಯಿಸಿದ್ದೆವು. ಆದರೆ ಮಹೇಂದ್ರ ಪೋಸ್ಟ್‌ಮಾರ್ಟಂ ಬೇಡ ಎಂದು ನಾಟಕ ಮಾಡಿದರು. ನಂತರ ತನಿಖೆಯ ವೇಳೆ ಮಹೇಂದ್ರಗೆ ಅನೈತಿಕ ಸಂಬಂಧವಿತ್ತು ಎಂಬುದು ಗೊತ್ತಾಯಿತು ಎಂದು ನಿಖಿತಾ ಹೇಳಿದ್ದಾರೆ.
‘ಕೃತಿಕಾ ಕ್ಲಿನಿಕ್ ತೆರೆಯುವ ಆಸೆ ಹೊಂದಿದ್ದರು. ಆದರೆ ಮಹೇಂದ್ರ ಯಾವತ್ತೂ ಬೆಂಬಲ ನೀಡಲಿಲ್ಲ. ಮ್ಯಾರೇಜ್ ಸರ್ಟಿಫಿಕೇಟ್ ಮಾಡಿಸಲು ಸಹ ಒಪ್ಪಲಿಲ್ಲ. ಕೃತಿಕಾ ಅಸೌಖ್ಯದಲ್ಲಿದ್ದಾಗಲೂ ಪತಿಯೇ ಡ್ರಿಪ್ ಹಾಕುತ್ತಿದ್ದರು. ಮಹೇಂದ್ರ ನನಗೆ ಅನವಶ್ಯಕ ಚಿಕಿತ್ಸೆ, ಔಷಧ ಕೊಡುತ್ತಿದ್ದಾರೆ ಎಂದು ಆಕೆ ನನ್ನ ಬಳಿ ಹೇಳಿದ್ದಳು’ ಎಂದು ಡಾ. ನಿಖಿತಾ ಹೇಳಿದ್ದಾರೆ.
ಎಫ್ಎಸ್ಎಲ್ ವರದಿಯ ಪ್ರಕಾರ, ಕೃತಿಕಾಗೆ ಪ್ರೊಪೊಫೋಲ್ ಎಂಬ ಅನಸ್ತೇಶಿಯಾ ಇಂಜೆಕ್ಷನ್ ನೀಡಲಾಗಿದೆ. ಇದು ಹೊರಗಿನಿಂದ ತರಿಸಿರಬಹುದು ಅಥವಾ ಕೆಲಸ ಮಾಡುವ ಸ್ಥಳದಿಂದ ಕೊಂಡಿರಬಹುದು ಎಂದು ಕುಟುಂಬದವರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಮಾರ್ಟಂ ಬೇಡವೆಂದು ನಾಟಕ ಮಾಡಿದ್ದ ಮಹೇಂದ್ರ
ಪೋಸ್ಟ್‌ಮಾರ್ಟಂ ವೇಳೆ ಮಹೇಂದ್ರ ಅತಿಯಾದ ನಾಟಕ ಮಾಡಿದ್ದ. ಕೃತಿಕಾ ದೇಹವನ್ನು ಕತ್ತರಿಸುವುದನ್ನು ನೋಡಲಾಗದು ಎಂದು ಕಣ್ಣೀರಿಟ್ಟು ದುಃಖ ವ್ಯಕ್ತಪಡಿಸಿದ್ದ. ಆ ಮೂಲಕ ಕೃತಿಕಾ ತಂದೆ-ತಾಯಿ ಎದುರು ಒಳ್ಳೆಯವನೆಂದು ಬಿಂಬಿಸಿದ್ದ ಎಂದು ನಿಖಿತಾ ಹೇಳಿದ್ದಾರೆ. ಆದರೂ ಅನುಮಾನ ಬಂದು ಪೋಸ್ಟ್ ಮಾರ್ಟಂಗೆ ಆಗ್ರಹಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.
ಕೃತಿಕಾಗೆ ಆರೋಗ್ಯ ಸಮಸ್ಯೆಯೇ ಇರಲಿಲ್ಲ: ನಿಖಿತಾ
ಕೃತಿಕಾಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ನಾನು ಆಕೆಯ ಅಕ್ಕ ಆಗಿರುವುದರಿಂದ ನನಗೆ ಎಲ್ಲಾ ಗೊತ್ತು. ಮಹೇಂದ್ರನನ್ನು ಸ್ವಂತ ಮಗನ ರೀತಿ ನಮ್ಮ ಅಪ್ಪ ಅಮ್ಮ ನೋಡಿಕೊಳ್ಳುತ್ತಿದ್ದರು. ನಾವಿಬ್ಬರು ಹೆಣ್ಣು ಮಕ್ಕಳು ಆಗಿರುವುದರಿಂದ ಆತನನ್ನೇ ಮಗ ಎಂದುಕೊಂಡಿದ್ದರು ಎಂದು ನಿಖಿತಾ ತಿಳಿಸಿದ್ದಾರೆ.
ಕ್ಲಿನಿಕ್ ಮಾಡಿಕೊಡುವಂತೆ ಮಹೇಂದ್ರ ಒತ್ತಾಯ ಮಾಡಿದ್ದ. ಮದುವೆ ಆದ ನಂತರ ಹಾಸ್ಪಿಟಲ್ ಮಾಡಿಕೊಡಿ ಎಂದಿದ್ದ. ಅಷ್ಟೆಲ್ಲ ಆಗಲ್ಲಪ್ಪ, ಕ್ಲಿನಿಕ್ ಮಾಡಿಕೊಡುತ್ತೇವೆ ಎಂದು ತಂದೆ ಹೇಳಿದ್ದರು. ಹಾಸ್ಪಿಟಲ್ ಮಾಡಿಕೊಟ್ಟಿಲ್ಲ ಎಂಬುದು ಕೂಡ ಕಾರಣ ಇರಬಹುದು ಎಂದು ನಿಖಿತಾ ಹೇಳಿದ್ದಾರೆ.
ಕೃತಿಕಾ ಕುಟುಂಬದವರು ಆಕೆಯ ಸಮಾಜ ಸೇವಾ ಕನಸುಗಳನ್ನು ಕೂಡ ನೆನಪಿಸಿಕೊಂಡಿದ್ದಾರೆ. ಅವಳು ಬಡ ಜನರಿಗೆ ಉಚಿತ ಮೆಡಿಕಲ್ ಕ್ಯಾಂಪ್ ಮಾಡಲು ಬಯಸುತ್ತಿದ್ದಳು. ದೇಶಕ್ಕೆ ಉಪಕಾರ ಮಾಡಬೇಕೆಂದಿದ್ದಳು ಎಂದು ತಿಳಿಸಿದ್ದಾರೆ. ಅಲ್ಲದೆ, ತೀವ್ರ ದುಃಖದಿಂದ ಬಳಲುತ್ತಿರುವ ಕುಟುಂಬ, ಕೃತಿಕಾ ವಾಸಿಸುತ್ತಿದ್ದ ಮನೆಯನ್ನು ಇಸ್ಕಾನ್ ದೇವಾಲಯಕ್ಕೆ ದಾನ ಮಾಡಿದೆ. ಆ ಮನೆಯಲ್ಲಿ ಇರುವುದು ನಮ್ಮಿಂದಾಗದು. ಆದ್ದರಿಂದ ದೇವರಿಗೆ ಸಮರ್ಪಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.
For More Updates Join our WhatsApp Group :




