ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ, ಕಾಂಗ್ರೆಸ್ ಪಕ್ಷವು ಮಹಿಳಾ ಮತದಾರರನ್ನು ಸೆಳೆಯಲು ರಾಹುಲ್ ಗಾಂಧಿ (Rahul Gandhi) ಅವರ ಚಿತ್ರವಿರುವ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಯೋಜನೆಯನ್ನು ಘೋಷಿಸಿದೆ. ಆದರೆ, ಈ ಕಾರ್ಯಕ್ರಮವು ಭಾರೀ ವಿವಾದಕ್ಕೆ ಕಾರಣವಾಗಿದೆ.
`ಪ್ರಿಯದರ್ಶಿನಿ ಉಡಾನ್ ಯೋಜನಾ’ ಎಂಬ ಈ ಯೋಜನೆಯಡಿ, ಬಿಹಾರದಲ್ಲಿ (Bihar) 5 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಈ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ. ಈ ಯೋಜನೆಯು ಋತುಸ್ರಾವದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಪಕ್ಷವು ಹೇಳಿಕೊಂಡಿದೆ.

ಬಿಹಾರ ಕಾಂಗ್ರೆಸ್‌ನ ಅಧ್ಯಕ್ಷ ರಾಜೇಶ್ ಕುಮಾರ್ ಅವರು ಶುಕ್ರವಾರ ಪಾಟ್ನಾದ ಸದಾಕತ್ ಆಶ್ರಮದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಯೋಜನೆಯನ್ನು ಘೋಷಿಸಿದರು. ಈ ಕಾರ್ಯಕ್ರಮವನ್ನು ಮಹಿಳಾ ಕಾಂಗ್ರೆಸ್‌ನ ಮೂಲಕ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್‌ಗಳ ಮೇಲೆ ರಾಹುಲ್ ಗಾಂಧಿ ಅವರ ಚಿತ್ರದ ಜೊತೆಗೆ, ಕಾಂಗ್ರೆಸ್‌ನ ಚುನಾವಣಾ ಭರವಸೆಯಾದ `ಮಾಯಿ ಬೆಹನ್ ಮಾನ್ ಯೋಜನಾ’ ಅಡಿಯಲ್ಲಿ ಅಗತ್ಯವಿರುವ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ಆರ್ಥಿಕ ನೆರವು ನೀಡುವ ಘೋಷಣೆಯೂ ಇದೆ. ಈ ಯೋಜನೆಯನ್ನು ಅಕ್ಷಯ್ ಕುಮಾರ್ ಅಭಿನಯದ `ಪ್ಯಾಡ್‌ಮ್ಯಾನ್’ ಚಿತ್ರದಿಂದ ಸ್ಫೂರ್ತಿಗೊಂಡಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ
ರಾಹುಲ್ ಗಾಂಧಿ ಅವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ಗಳ ಪ್ಯಾಕೆಟ್‌ಗಳ ಮೇಲೆ ಮುದ್ರಿಸಿರುವುದನ್ನು ಬಿಜೆಪಿ ಮತ್ತು ಜೆಡಿಯು ತೀವ್ರವಾಗಿ ಖಂಡಿಸಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿ, `ರಾಹುಲ್ ಗಾಂಧಿ ಅವರ ಚಿತ್ರವನ್ನು ಸ್ಯಾನಿಟರಿ ಪ್ಯಾಡ್‌ನ ಮೇಲೆ ಮುದ್ರಿಸುವುದು ಬಿಹಾರದ ಮಹಿಳೆಯರಿಗೆ ಅವಮಾನವಾಗಿದೆ. ಕಾಂಗ್ರೆಸ್ ಮಹಿಳಾ ವಿರೋಧಿ ಪಕ್ಷವಾಗಿದೆ. ಬಿಹಾರದ ಮಹಿಳೆಯರು ಕಾಂಗ್ರೆಸ್ ಮತ್ತು ಆರ್‌ಜೆಡಿಗೆ ಪಾಠ ಕಲಿಸಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.