ನಗರದಿಂದ ಗ್ರಾಮಾಂತರಕ್ಕೆ ಬಿಎಂಟಿಸಿ ಬಸ್ ಸೇವೆ ವಿಸ್ತರಣೆ
ಬೆಂಗಳೂರು : ಬೆಂಗಳೂರು ನಗರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಬೇಕು ಅಂದರೆ ಬಿಎಂಟಿಸಿ ಬಸ್ ಬೇಕೇಬೇಕು. ರಾಜಧಾನಿಯ ಗಲ್ಲಿ ಗಲ್ಲಿಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡುತ್ತವೆ. ಆದರೆ ಇನ್ಮುಂದೆ ಬಿಎಂಟಿಸಿ ಬಸ್ಸುಗಳು ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ಸಂಚಾರ ಮಾಡಲು ಸಜ್ಜಾಗಿವೆ. ಇಲ್ಲಿಯವರೆಗೆ ಬಿಎಂಟಿಸಿ ಬಸ್ಸುಗಳು 40 ಕಿಮೀ ವ್ಯಾಪ್ತಿಯಲ್ಲಿ ಮಾತ್ರ ಸಂಚಾರ ಮಾಡುತ್ತಿದ್ದವು. ಇನ್ಮುಂದೆ ರಾಮನಗರ, ಕನಕಪುರ, ನೆಲಮಂಗಲ-ಹೊಸಕೋಟೆ, ದೇವನಹಳ್ಳಿ- ದೊಡ್ಡಬಳ್ಳಾಪುರಕ್ಕೂ ಸಂಚಾರ ಮಾಡಲಿವೆ.
ಬಿಎಂಟಿಸಿ ಹೊಸ ನಿರ್ಧಾರ ಪ್ರಯಾಣಿಕರಿಗೂ ಖುಷಿಕೊಟ್ಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಪ್ರಯಾಣಿಕರು, ಗ್ರಾಮಾಂತರ ಭಾಗಗಳಿಗೂ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡುವುದರಿಂದ ಶಾಲೆ-ಕಾಲೇಜು, ಕೆಲಸಕ್ಕೆ ಹೋಗುವವರಿಗೆ ತುಂಬಾ ಸಹಾಯ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ಬಸ್ಸುಗಳು ಸೇರಿದಂತೆ ಒಟ್ಟು 6750 ಬಸ್ಸುಗಳಿವೆ. ಪ್ರತಿದಿನ 45 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಒಂದು ದಿನಕ್ಕೆ ಬಿಎಂಟಿಸಿ ಬಸ್ಗಳು 13 ಲಕ್ಷ ಕಿಮೀ ಸಂಚಾರ ಮಾಡುತ್ತವೆ.
ಯಾವೆಲ್ಲ ಪ್ರದೇಶಗಳಿಗೆ ಬಿಎಂಟಿಸಿ ಬಸ್ ಸಂಚಾರ ವಿಸ್ತರಣೆ?
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ನಿಂದ ರಾಮನಗರಕ್ಕೆ, ಬನಶಂಕರಿ ಬಸ್ ಸ್ಟ್ಯಾಂಡ್ ನಿಂದ ಕನಕಪುರಕ್ಕೆ, ಮೆಜಸ್ಟಿಕ್ ಕೆಂಪೇಗೌಡ ಬಸ್ ಸ್ಟ್ಯಾಂಡ್ನಿಂದ ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರಕ್ಕೆ ಬಸ್ಸುಗಳು ಸಂಚಾರ ಮಾಡಲಿವೆ.
ಪ್ರಯಾಣಿಕರ ವೆಚ್ಚ ಉಳಿತಾಯ
ಬಿಎಂಟಿಸಿಯು 80 ಕಿಮೀ ವ್ಯಾಪ್ತಿಗೆ ಸೇವೆ ವಿಸ್ತರಣೆ ಮಾಡುವ ಮೂಲಕ ಗ್ರಾಮಾಂತರ ಪ್ರದೇಶಗಳು ಹಾಗೂ ನಗರ ಪ್ರದೇಶದ ಸಂಪರ್ಕ ಮತ್ತಷ್ಟು ಬಲವಾಗಲಿದೆ. ಉದ್ಯೋಗ, ಶಿಕ್ಷಣ ಹಾಗೂ ಚಿಕಿತ್ಸಾ ಅಗತ್ಯಗಳಿಗೆ ದಿನನಿತ್ಯ ನಗರಕ್ಕೆ ಬರುವ ಪ್ರಯಾಣಿಕರಿಗೆ ಇದು ಸಮಯ ಮತ್ತು ವೆಚ್ಚ ಉಳಿತಾಯಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಇಷ್ಟು ದಿನಗಳ ಕಾಲ ನಗರದೊಳಗೆ ಮಾತ್ರ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ಬಸ್ಸುಗಳು ಇನ್ಮುಂದೆ ಬೆಂಗಳೂರು ಗ್ರಾಮಾಂತರ ಭಾಗಗಳಿಗೂ ಸಂಚಾರ ಮಾಡುವುದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ದೊಡ್ಡಮಟ್ಟದಲ್ಲಿ ಸಹಾಯವಾಗುವುದರಲ್ಲಿ ಅನುಮಾನವಿಲ್ಲ.
For More Updates Join our WhatsApp Group :




