ಪೂಜಾ ಹೆಗ್ಡೆ ಕರ್ನಾಟಕ ಮೂಲದವರಾದರೂ ಬೆಳೆದಿದ್ದೆಲ್ಲ ಮುಂಬೈನಲ್ಲಿ. ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿದ್ದರು ನಟಿ ಹೆಚ್ಚು ಜನಪ್ರಿಯವಾಗಿರುವುದು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೇ. ಕೆಲವು ಅದ್ಭುತ ಸಿನಿಮಾಗಳಲ್ಲಿ ಪೂಜಾ ನಟಿಸಿದ್ದಾರೆ. ಇದೀಗ ಬಾಲಿವುಡ್ vs ದಕ್ಷಿಣ ಭಾರತ ಚರ್ಚೆಯಲ್ಲಿ ಪೂಜಾ ಹೆಗ್ಡೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ಮತ್ತು ದಕ್ಷಿಣ ಭಾರತ ಚಿತ್ರರಂಗದ ನಡುವೆ ಯಾವುದು ಉತ್ತಮ ಎಂಬ ಬಗ್ಗೆ ಚರ್ಚೆ ಕಳೆದ ಕೆಲ ವರ್ಷಗಳಿಂದ ಚಾಲ್ತಿಯಲ್ಲಿದೆ. ಮೊದಲೆಲ್ಲ ಭಾರತೀಯ ಚಿತ್ರರಂಗ ಎಂದರೆ ಬಾಲಿವುಡ್ ಎಂಬ ಮಾತು ಕೇಳಿ ಬರುತ್ತಿತ್ತು, ಆದರೆ ಇದೀಗ ದಕ್ಷಿಣ ಭಾರತ ಚಿತ್ರರಂಗ, ಬಾಲಿವುಡ್ ಅನ್ನು ಹಿಂದೆ ತಳ್ಳಿದೆ. ಚಿತ್ರರಂಗ ಹಾಗೂ ಬಾಲಿವುಡ್ ಎರಡೂ ಕಡೆ ಬ್ಯುಸಿಯಾಗಿರುವ ನಟ ಮತ್ತು ನಟಿಯರು, ಬಾಲಿವುಡ್ vs ದಕ್ಷಿಣ ಭಾರತ ಚಿತ್ರರಂಗದ ಚರ್ಚೆ ಬಂದಾಗ ಜಾರು ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಆದರೆ ನಟಿ ಪೂಜಾ ಹೆಗ್ಡೆ ಹಾಗೆ ಮಾಡಿಲ್ಲ. ಬಾಲಿವುಡ್ vs ದಕ್ಷಿಣ ಚಿತ್ರರಂಗದ ಚರ್ಚೆಯಲ್ಲಿ ಅವರ ಉತ್ತರ ಸ್ಪಷ್ಟ.
ತಮಿಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಹೆಚ್ಚು ಸುದ್ದಿಯಾಗಿದ್ದು ಹೃತಿಕ್ ರೋಷನ್ ಜೊತೆ ನಟಿಸಿದ ‘ಮೊಹಂಜೊಧಾರೊ’ ಸಿನಿಮಾ ಮೂಲಕ. ಕರ್ನಾಟಕ ಮೂಲದ ಈ ನಟಿ, ಬೆಳೆದಿದ್ದೆಲ್ಲ ಬಾಂಬೆಯಲ್ಲಿಯೇ ಆದರೆ ಪೂಜಾ ಹೆಗ್ಡೆ ಹೆಚ್ಚು ಜನಪ್ರಿಯವಾಗಿರುವುದು ದಕ್ಷಿಣ ಭಾರತ ಚಿತ್ರರಂಗದಲ್ಲೇ. ಅದರಲ್ಲೂ ತೆಲುಗು ಹಾಗೂ ತಮಿಳು ಚಿತ್ರರಂಗದವರ ಬಲು ಮೆಚ್ಚಿನ ನಟಿ. ಹಾಗೆಂದು ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿಯೇ ಇಲ್ಲವೆಂದೇನಿಲ್ಲ. ದಕ್ಷಿಣ ಭಾರತ ಚಿತ್ರರಂಗಗಳಲ್ಲಿ ನಟಿಸುವ ಜೊತೆ-ಜೊತೆಗೆ ಹಲವು ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ ಪೂಜಾ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಪೂಜಾ ಹೆಗ್ಡೆ, ‘ನನಗೆ ದಕ್ಷಿಣ ಭಾರತ ಚಿತ್ರರಂಗವೇ ಹೆಚ್ಚು ಪ್ರಿಯ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಮೊದಲ ಬಾಲಿವುಡ್ ಸಿನಿಮಾ ಹೊರತುಪಡಿಸಿ, ಬಾಲಿವುಡ್ ನನಗೆ ಒಳ್ಳೆಯ ಪಾತ್ರಗಳನ್ನು ನೀಡಿಲ್ಲ. ಮೊದಲ ಸಿನಿಮಾದ ಹೊರತಾಗಿ ಬಾಲಿವುಡ್ನಲ್ಲಿ ನಾನು ನಟಿಸಿದ ಎಲ್ಲ ಸಿನಿಮಾಗಳಲ್ಲಿಯೂ ನನ್ನನ್ನು ಕೇವಲ ಗ್ಲಾಮರ್ ಹಾಗೂ ಹಾಡು-ಡ್ಯಾನ್ಸಿನ ಕಾರಣಕ್ಕೆ ಮಾತ್ರವೇ ಬಳಸಿಕೊಳ್ಳಲಾಗಿದೆ’ ಎಂದಿದ್ದಾರೆ ನಟಿ ಪೂಜಾ ಹೆಗ್ಡೆ.
ಆದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹಾಗಿಲ್ಲ. ಇತ್ತೀಚೆಗೆ ಸಹ ನಾನು ನಟಿಸಿದ ‘ರೆಟ್ರೊ’ ಸಿನಿಮಾನಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆ ಇತ್ತು, ನಟನೆಗೆ ಸಾಕಷ್ಟು ಅವಕಾಶ ಇದ್ದ ಪಾತ್ರ ಅದಾಗಿತ್ತು. ಅಂಥಹಾ ಪಾತ್ರಗಳಲ್ಲಿ ಇನ್ನಷ್ಟು ನಟಿಸಲು ನಾನು ಎದುರು ನೋಡುತ್ತೀನಿ. ಅದರ ಹೊರತಾಗಿ ತೆಲುಗಿನ ‘ಅರವಿಂದ ಸಮೇತ ವೀರ ರಾಘವ’, ‘ರಾಧೆ-ಶ್ಯಾಮ್’ ಸಿನಿಮಾಗಳಲ್ಲಿಯೂ ದೊಡ್ಡ ಸ್ಟಾರ್ ನಟರು ಇದ್ದಾಗಿಯೂ ನನ್ನ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆ ಇತ್ತು, ಭಾವುಕ ಅಂಶಗಳು ಇದ್ದವು, ಕತೆಯಲ್ಲಿ ನನ್ನ ಪಾತ್ರ ನಾಯಕನ ಪಾತ್ರದಷ್ಟೆ ಮುಖ್ಯವಾಗಿತ್ತು’ ಎಂದಿದ್ದಾರೆ ಪೂಜಾ ಹೆಗ್ಡೆ.
ಪೂಜಾ ಹೆಗ್ಡೆ ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ಐಟಂ ಹಾಡೊಂದರಲ್ಲಿ ಇದೀಗ ನಟಿಸಿದ್ದಾರೆ. ಅದರ ಹೊರತಾಗಿ, ದಳಪತಿ ವಿಜಯ್ ನಟನೆಯ ಕೊನೆಯ ಸಿನಿಮಾ ‘ಜನನಾಯಗನ್’, ರಾಘವ್ ಲಾರೆನ್ಸ್ ನಟಿಸಿ ನಿರ್ದೇಶನ ಮಾಡುತ್ತಿರುವ ‘ಕಾಂಚನಾ 4’ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಅದರ ಜೊತೆಗೆ ಹಿಂದಿಯ ‘ಹೇ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.
For More Updates Join our WhatsApp Group :
