ವಿಜೃಂಭಿಸಿದ ಪೂಜಾ, ರಾಧಾ, ಮಂಧಾನ ಅರ್ಧಶತಕ: ಟಿ-20 ಸರಣಿ ಸಮಬಲ

ಚೆನ್ನೈ(ತಮಿಳುನಾಡು): ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಿನ ಮಹಿಳಾ ಟಿ-20 ಸರಣಿ 1-1 ಅಂತರದಿಂದ ಸಮಬಲದಲ್ಲಿ ಮುಕ್ತಾಯವಾಗಿದೆ. ಮೂರನೇ ಮತ್ತು ಅಂತಿಮ ಪಂದ್ಯವನ್ನು ಭಾರತೀಯ ವನಿತೆಯರು 10 ವಿಕೆಟ್​​ಗಳಿಂದ ಗೆದ್ದರು. ಹರಿಣ ಪಡೆ ಮೊದಲ ಪಂದ್ಯ ಗೆದ್ದರೆ, ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು.

ಇಲ್ಲಿನ ಎಂ.ಎ.ಚಿದಂಬರಂ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಪೂಜಾ ವಸ್ತ್ರಾಕರ್ ಮತ್ತು ರಾಧಾ ಯಾದವ್ ಬೌಲಿಂಗ್​ ದಾಳಿಗೆ ನಲುಗಿತು. ಹೀಗಾಗಿ, 17.1 ಓವರ್​​ಗಳಲ್ಲಿ ಕೇವಲ 84 ರನ್‌ಗಳಿಗೆ ಸರ್ವಪತನ ಕಂಡಿತು. ಈ ಅಲ್ಪ ಗುರಿಯನ್ನು ಭಾರತೀಯ ಆಟಗಾರ್ತಿಯರು ವಿಕೆಟ್​ ನಷ್ಟವಿಲ್ಲದೇ ತಲುಪಿದರು.

ಮಂಧಾನ ಅರ್ಧಶತಕ: ಹರಿಣಗಳು ನೀಡಿದ್ದ 84 ರನ್​ಗಳ ಗುರಿ ಬೆನ್ನಟ್ಟಿದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ನಿರಾಯಾಸವಾಗಿ ತಂಡಕ್ಕೆ ಗೆಲುವು ತಂದುಕೊಟ್ಟರು. ದೊಡ್ಡ ಹೊಡೆತಗಳ ಮೂಲಕ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದ ಮಂಧಾನ 54 ರನ್​ ಕಲೆ ಹಾಕಿದರು. ಮತ್ತೊಂದೆಡೆ, ಶಫಾಲಿ 27 ರನ್​ ಗಳಿಸಿ ಅಜೇಯರಾಗುಳಿದರು.

40 ಎಸೆತಗಳನ್ನು ಎದುರಿಸಿದ ಮಂಧಾನ ಇನ್ನಿಂಗ್ಸ್​ 8 ಬೌಂಡರಿ ಹಾಗೂ 2 ಸಿಕ್ಸರ್​ಗಳನ್ನು ಒಳಗೊಂಡಿತ್ತು. ಹರಿಣಗಳು ಆರು ಬೌಲರ್​ಗಳನ್ನು ಇಳಿಸಿದರೂ ವಿಕೆಟ್​ ಕಬಳಿಸುವಲ್ಲಿ ವಿಫಲರಾದರು. ಅಂತಿಮವಾಗಿ, ಟೀಂ ಇಂಡಿಯಾ 10.5 ಓವರ್‌ಗಳಲ್ಲೇ ವಿಜಯದ ನಗೆ ಬೀರಿತು.

Leave a Reply

Your email address will not be published. Required fields are marked *