ಬೆಂಗಳೂರು ನಗರದಲ್ಲಿ ‘ಬಾಟಲ್ ವಾಟರ್’ ಕ್ರೇಜ್ ನಲ್ಲಿ ನೀರಿಗಿಂತ ಡಿಮಾಂಡ್ ಹೆಚ್ಚು.
ಬೆಂಗಳೂರು: ಭಾರತದಲ್ಲಿ ಕುಡಿಯುವ ನೀರಿನ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ, ಕ್ರಾಂತಿಕಾರಕ ಬದಲಾವಣೆಯಾಗಿದ್ದು, ದೇಶದ ಶೇ 95ರಷ್ಟು ಕುಟುಂಬಗಳು ಇಂದು ಶುದ್ಧ ಕುಡಿಯುವ ನೀರಿನ ಸೌಲಭ್ಯ ಹೊಂದಿವೆ. ಇದರೊಂದಿಗೆ, ಕುಡಿಯುವ ನೀರು ಸಂಪರ್ಕದ ಈ ಪ್ರಗತಿಯಲ್ಲಿ ಭಾರತ ಜಗತ್ತಿಗೇ ಮಾದರಿಯಾಗಿದೆ. ಆದರೆ, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿಮ ನಗರವಾಸಿಗಳು ನಲ್ಲಿ ನೀರಿಗಿಂತ ಹೆಚ್ಚಾಗಿ ‘ಬಾಟಲ್ ವಾಟರ್’ ಅಥವಾ ‘ಕ್ಯಾನ್ ನೀರ’ನ್ನು ಅವಲಂಬಿಸಿರುವುದು ತಿಳಿದುಬಂದಿದೆ.
ದಕ್ಷಿಣದ ರಾಜ್ಯಗಳೇ ಟಾಪ್!
ರಾಷ್ಟ್ರೀಯ ಮಾದರಿ ಸಮೀಕ್ಷೆ (NSS) 2022-23ರ ದತ್ತಾಂಶದ ಪ್ರಕಾರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದ ನಗರ ಪ್ರದೇಶಗಳಲ್ಲಿ ಕಾಲು ಭಾಗಕ್ಕೂ ಹೆಚ್ಚು (ಶೇ 25+) ಕುಟುಂಬಗಳು ಬಾಟಲಿ ನೀರನ್ನೇ ಪ್ರಧಾನ ಆಧಾರವಾಗಿರಿಸಿಕೊಂಡಿವೆ. ಮನೆಗಳಿಗೆ ವಿತರಿಸಲಾಗುವ ಕ್ಯಾನ್ ವಾಟರ್ ಸಂಸ್ಕೃತಿ ಇಲ್ಲಿ ಭಾರಿ ಜನಪ್ರಿಯವಾಗಿದೆ.
ಕೇರಳದಲ್ಲಿ ಬಾವಿ ನೀರಿಗೇ ಆದ್ಯತೆ
ದಕ್ಷಿಣದ ಉಳಿದ ರಾಜ್ಯಗಳು ಬಾಟಲಿ ನೀರಿಗೆ ಮಾರುಹೋಗಿದ್ದರೆ, ಕೇರಳ ಮಾತ್ರ ಭಿನ್ನವಾಗಿದೆ. ಇಲ್ಲಿ ಇಂದಿಗೂ ಮನೆಗಳಲ್ಲಿರುವ ಬಾವಿ ನೀರು ಕುಡಿಯುವ ನೀರಿನ ಪ್ರಮುಖ ಮೂಲವಾಗಿ ಮುಂದುವರಿದಿದೆ.
ನಗರ ಭಾರತದ ಒಟ್ಟಾರೆ ಚಿತ್ರಣ ಗಮನಿಸಿದರೆ, ಇಂದಿಗೂ ಶೇ 70ರಷ್ಟು ಜನರಿಗೆ ನಲ್ಲಿ ನೀರೇ ಆಸರೆ. ಆದರೆ ದಕ್ಷಿಣದ ಪ್ರಭಾವದಿಂದಾಗಿ ದೇಶದ ಒಟ್ಟಾರೆ ನಗರವಾಸಿಗಳಲ್ಲಿ ಶೇ 15ರಷ್ಟು ಮಂದಿ ಬಾಟಲಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ, ನಲ್ಲಿ ನೀರಿಗಿಂತ ಶುದ್ಧೀಕರಿಸಿದ ಬ್ರಾಂಡೆಡ್ ನೀರಿನತ್ತ ಭಾರತೀಯ ನಗರವಾಸಿಗಳು ಆಕರ್ಷಿತರಾಗುತ್ತಿರುವುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ.
ಬೆಂಗಳೂರಿನಲ್ಲಿ ಈ ನೀರಿನ ಉದ್ಯಮವು ವಾರ್ಷಿಕವಾಗಿ ಅಂದಾಜು 1,000 ಕೋಟಿ ರೂ.ಗಿಂತಲೂ ಹೆಚ್ಚಿನ ವಹಿವಾಟು ನಡೆಸುತ್ತದೆ. ನಗರದಲ್ಲಿ ಅಧಿಕೃತವಾಗಿ ಸುಮಾರು 500ಕ್ಕೂ ಹೆಚ್ಚು ಐಎಸ್ಐ (ISI) ಮುದ್ರೆ ಹೊಂದಿದ ನೀರು ಶುದ್ಧೀಕರಣ ಘಟಕಗಳಿವೆ. ಮತ್ತೊಂದೆಡೆ, ಅನಧಿಕೃತವಾಗಿಯೂ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಘಟಕಗಳು ಕಾರ್ಯಾಚರಿಸುತ್ತಿವೆ.
For More Updates Join our WhatsApp Group :




