ಬೆಂಗಳೂರು: ಬೆಂಗಳೂರಿನ ಆರ್ಟಿ ನಗರ ಪ್ರದೇಶದಲ್ಲಿ ಬ್ರೆಜಿಲ್ನ ಮಾಡೆಲ್ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬ್ಲಿಂಕಿಟ್ ಡೆಲಿವರಿ ಏಜೆಂಟ್ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಅಕ್ಟೋಬರ್ 17 ರಂದೇ ನಡೆದಿದ್ದು, ಇದೀಗ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಯ ಬಂಧನವಾಗಿದೆ. ಸಂತ್ರಸ್ತೆಯ ಉದ್ಯೋಗದಾತ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅಪಾರ್ಟ್ಮೆಂಟೊಂದರಲ್ಲಿ ಘಟನೆ ನಡೆದಿದ್ದು, ಅಲ್ಲಿ ಸಂತ್ರಸ್ತೆಯು ಇತರ ಇಬ್ಬರು ಮಹಿಳೆಯರೊಂದಿಗೆ ವಾಸಿಸುತ್ತಿದ್ದಾರೆ.
ದೂರು ದಾಖಲಾದ ದಿನವೇ ಆರೋಪಿ ಕುಮಾರ್ ರಾವ್ ಪವಾರ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ ವಿಭಾಗ) ಬಾಬಾಸಾಬ್ ನೆಮಗೌಡ್ ದೃಢಪಡಿಸಿದ್ದಾರೆ. ಆರೋಪಿಯು ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದು, ಬ್ಲಿಂಕಿಟ್ನಲ್ಲಿ ಅರೆಕಾಲಿಕ ವಿತರಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಎಫ್ಐಆರ್ ಪ್ರಕಾರ, ಮಾಡೆಲ್ ಬ್ಲಿಂಕಿಟ್ ಆ್ಯಪ್ ಮೂಲಕ ಅಕ್ಟೋಬರ್ 17ರಂದು ಮಧ್ಯಾಹ್ನ 3.20 ರ ಸುಮಾರಿಗೆ ಆಹಾರ ಆರ್ಡರ್ ಮಾಡಿದ್ದರು. ಆಹಾರ ವಿತರಣೆಯ ಸಮಯದಲ್ಲಿ, ಆರೋಪಿಯು ಅನುಚಿತವಾಗಿ ವರ್ತಿಸಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಸ್ಪರ್ಶಿಸಿದ್ದಾನೆ. ಆಘಾತ ಮತ್ತು ಭಯದಿಂದ ಸಂತ್ರಸ್ತೆಯು ಮನೆಯೊಳಗೆ ಓಡಿಹೋಗಿದ್ದರು. ಆದರೆ ಭಯದಿಂದಾಗಿ ಘಟನೆ ಬಗ್ಗೆ ತಕ್ಷಣವೇ ದೂರು ನೀಡಿರಲಿಲ್ಲ ಎನ್ನಲಾಗಿದೆ.
ಕೆಲವು ದಿನಗಳ ನಂತರ ಸಂತ್ರಸ್ತೆಯು ರೂಮ್ಮೇಟ್ಗಳಿಗೆ ವಿಷಯ ತಿಳಿಸಿದ್ದಾರೆ. ನಂತರ ಅವರು ನಡೆದ ಘಟನೆಯ ಬಗ್ಗೆ ಉದ್ಯೋಗದಾತರಿಗೆ ಮಾಹಿತಿ ನೀಡಿದ್ದಾರೆ. ಉದ್ಯೋಗದಾತರು ಅಪಾರ್ಟ್ಮೆಂಟ್ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅಕ್ಟೋಬರ್ 25 ರಂದು ಔಪಚಾರಿಕ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ತಕ್ಷಣವೇ ಬಂಧಿಸಿ ಭಾರತೀಯ ದಂಡ ಸಂಹಿತೆಯ (BNS) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
For More Updates Join our WhatsApp Group :




