ದಾವಣಗೆರೆ: ಜಿಲ್ಲೆಯ ಜೀವನಾಡಿ ತುಂಗಭದ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅವಾಂತರ ಕೂಡ ಮಾಡಿದೆ. ಹರಿಹರ ಹಾಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಕೆಲ ಗ್ರಾಮಗಳ ಸಂಪರ್ಕದ ಕೊಂಡಿ ಪತ್ತೆಪುರ – ನಂದಿಗುಡಿ ಸೇತುವೆ, ರಸ್ತೆ ಜಲಾವೃತಗೊಂಡಿದೆ. ಈ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಈ ಭಾಗದ ಜನರು ಜನಪ್ರತಿನಿಧಿಗಳಿಗೆ ಹೇಳಿದ್ದರೂ ಕೂಡ ಸಮಸ್ಯೆ ಮಾತ್ರ ಬಗೆಹರೆದಿಲ್ಲ.
ಶ್ರೀ ಉಕ್ಕಡಗಾತ್ರಿ ಕ್ಷೇತ್ರಕ್ಕೆ ಈ ಸೇತುವೆ ಹಾಗು ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮಾಕನೂರು, ಮುದ್ದೇನೂರು, ನಾಗೇನಹಳ್ಳಿ, ಹನುಮಹಳ್ಳಿ ಹೀಗೆ ಸಾಕಷ್ಟು ಹಳ್ಳಿಗಳು ದಾವಣಗೆರೆ ಜಿಲ್ಲೆಯ ಗಡಿ ಭಾಗದ ಹಳ್ಳಿಗಳಾಗಿವೆ. ಈ ಹಳ್ಳಿಯ ಜನ ದಾವಣಗೆರೆಯ ಹರಿಹರ ತಾಲೂಕಿನ ಪತ್ತೆಪುರ, ನಂದಿಗುಡಿ, ಮಲೇಬೆನ್ನೂರು, ಬಾನುಹಳ್ಳಿಗೆ ಈ ಸೇತುವೆ ಮೂಲಕ ತೆರಳುತ್ತಿದ್ದರು. ಈಗ ಸೇತುವೆ ಮುಳುಗಡೆಯಾಗಿರುವುದರಿಂದ ತುಮ್ಮಿನಕಟ್ಟೆ ರಸ್ತೆ ಮೂಲಕ 15 ಕಿ.ಮೀ. ಕ್ರಮಿಸಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.