ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಗಾತ್ರವು 32.07 ಲಕ್ಷ ಕೋಟಿಯದ್ದಾಗಿದೆ. ಖರ್ಚು 48.21 ಲಕ್ಷ ಕೋಟಿ ಇದೆ. ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿಯಲ್ಲಿ 63 ಪೈಸೆ ನೇರ ಮತ್ತು ಪರೋಕ್ಷ ತೆರಿಗೆಯಿಂದ ಕೂಡಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2024-25ನೇ ಸಾಲಿನ ಕೇಂದ್ರ ಬಜೆಟ್ನ ದಾಖಲೆಗಳ ಪ್ರಕಾರ, ಸರ್ಕಾರದ ಬೊಕ್ಕಸದಲ್ಲಿರುವ ಪ್ರತಿ ರೂಪಾಯಿಗೆ 63 ಪೈಸೆಯು ನೇರ ಮತ್ತು ಪರೋಕ್ಷ ತೆರಿಗೆಗಳಿಂದ ಬರುತ್ತದೆ. ಉಳಿದ 27 ಪೈಸೆ ಸಾಲ ಮತ್ತು ಇತರ ಮೂಲಗಳಿಂದ ಬಂದರೆ, 9 ಪೈಸೆ ತೆರಿಗೆಯೇತರ ಆದಾಯ ಮತ್ತು 1 ಪೈಸೆ ಸಾಲದ ಹೊರತಾದ ಬಂಡವಾಳದಿಂದ ಬರಲಿದೆ ಎಂದು ವಿವರಿಸಲಾಗಿದೆ.
ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ ಸೇರಿ ನೇರ ಟ್ಯಾಕ್ಸ್ನಿಂದ 36 ಪೈಸೆ ಸಂಗ್ರಹವಾಗುತ್ತದೆ. ಆದಾಯ ತೆರಿಗೆಯು 19 ಪೈಸೆಯನ್ನು ನಿಗದಿ ಮಾಡಿದ್ದರೆ, ಕಾರ್ಪೊರೇಟ್ ತೆರಿಗೆಯು 17 ಪೈಸೆಯಷ್ಟು ಉತ್ಪಾದನೆಯಾಗಲಿದೆ ಎಂದು ಹೇಳಿದೆ.
ಪರೋಕ್ಷ ಟ್ಯಾಕ್ಸ್ಗಳಲ್ಲಿ, ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಪ್ರತಿ ರೂಪಾಯಿಯಲ್ಲಿ ಗರಿಷ್ಠ 18 ಪೈಸೆಯಷ್ಟು ಬರಲಿದೆ. ಅಬಕಾರಿ ಸುಂಕದಿಂದ ಪ್ರತಿ ರೂಪಾಯಿಯಲ್ಲಿ 5 ಪೈಸೆ ಮತ್ತು ಕಸ್ಟಮ್ಸ್ ಲೆವಿಯಿಂದ 4 ಪೈಸೆ ಗಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಸಾಲಗಳಿಗೆ ಬರುವ ಬಡ್ಡಿ, ಇತರ ಮೂಲಗಳಿಂದ ಪ್ರತಿ ರೂಪಾಯಿಗೆ 27 ಪೈಸೆ ಬರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಖರ್ಚು?: ಪ್ರತಿ ರೂಪಾಯಿ ಖರ್ಚಿನಲ್ಲಿ ರಾಜ್ಯಗಳ ಪಾಲಿಗೆ 19 ಪೈಸೆ ನಿಗದಿ ಮಾಡಲಾಗಿದೆ. ಇದರಲ್ಲಿ 21 ಪೈಸೆಯಷ್ಟು ಆದಾಯ ನಿರೀಕ್ಷಿಸಲಾಗಿದೆ. ಇದು ನೇರ ಮತ್ತು ಪರೋಕ್ಷ ತೆರಿಗೆಯಿಂದ ಕೂಡಿದೆ. ರಕ್ಷಣಾ ಇಲಾಖೆಗೆ ನಿಗದಿ ಮಾಡಿದ ಹಣದಲ್ಲಿ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಪ್ರತಿ ರೂಪಾಯಿಯಲ್ಲಿ 8 ಪೈಸೆ ನೀಡಲಾಗುತ್ತದೆ. ಕೇಂದ್ರ ವಲಯದ ಯೋಜನೆಗಳ ವೆಚ್ಚವು ಪ್ರತಿ ರೂಪಾಯಿಯಲ್ಲಿ 16 ಪೈಸೆಯಾಗಿರುತ್ತದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 8 ಪೈಸೆಗಳಷ್ಟು ಹಂಚಿಕೆಯಾಗಲಿದೆ.