ಪಾಟ್ನಾ/ ವಿಜಯವಾಡ (ಬಿಹಾರ, ಆಂಧ್ರ): ಎನ್ಡಿಎದ ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಆಡಳಿತ ಇರುವ ಬಿಹಾರ ಹಾಗೂ ಚಂದ್ರಬಾಬು ನಾಯ್ಡು ಆಡಳಿತ ಇರುವ ಆಂಧ್ರಪ್ರದೇಶಕ್ಕೆ ಕೇಂದ್ರ ಬಜೆಟ್‌ನಲ್ಲಿ ಬಂಪರ್ ಆಫರ್ಗಳೇ ಸಿಕ್ಕಿವೆ. ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ರೂಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದರೆ, ಅತ್ತ ಬಿಹಾರಕ್ಕೆ ಅನಾಮತ್ತಾಗಿ 26 ಸಾವಿರ ಕೋಟಿ ರೂಗಳ ಯೋಜನೆಗಳನ್ನು ಘೋಷಿಸಲಾಗಿದೆ.
ಬಿಹಾರಕ್ಕೆ ಎರಡೆರಡು ಬಂಪರ್: ವಿಶೇಷ ಸ್ಥಾನಮಾನದ ಕುರಿತು ನಡೆಯುತ್ತಿರುವ ಚರ್ಚೆಯ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಬಿಹಾರದ ಪ್ರಮುಖ ಯೋಜನೆಗಳಿಗೆ 26,000 ಕೋಟಿ ರೂಪಾಯಿಗಳನ್ನು ಮೀಸಲಿಡುವುದಾಗಿ ಘೋಷಿಸಿದ್ದಾರೆ. ಈ ನಿಧಿಯು ಗಯಾದಲ್ಲಿ ಕೈಗಾರಿಕಾ ಬೆಳವಣಿಗೆಗೆ ಮತ್ತು ನಳಂದಾವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಬೋಧಗಯಾವನ್ನು ಗೌತಮ ಬುಧನು ಜ್ಞಾನೋದಯ ಮಾಡಿದ ಸ್ಥಳ ಎಂದೂ ಕರೆಯುತ್ತಾರೆ. ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಗಯಾದ ಪಕ್ಕದಲ್ಲಿ ನಳಂದಾ, ರಾಜ್ಯದ ಮತ್ತೊಂದು ಪ್ರಮುಖ ಪ್ರವಾಸಿ ತಾಣವಾಗಿದೆ. ನಳಂದಾ ವಿಶ್ವವಿದ್ಯಾಲಯವು ಪ್ರಪಂಚದಾದ್ಯಂತದ ವಿದ್ವಾಂಸರಿಗೆ ಪ್ರಮುಖ ಆಕರ್ಷಣೆಯಾಗಿದೆ.
ಅಷ್ಟೇ ಅಲ್ಲ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಿಸಲು ಈ ವಿಶೇಷ ಪ್ಯಾಕೇಜ್ನಲ್ಲಿ ಹಣವನ್ನು ನೀಡುವ ಘೋಷಣೆ ಮಾಡಲಾಗಿದೆ. ಜೊತೆಗೆ ಪಾಟ್ನಾ – ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ ಮತ್ತು ಬಕ್ಸರ್-ಭಾಗಲ್ಪುರ್ ಎಕ್ಸ್‌ಪ್ರೆಸ್‌ವೇಯಂತಹ ಯೋಜನೆಗನ್ನ ಕಲ್ಪಿಸುವ ಭರವಸೆ ನೀಡಲಾಗಿದೆ.
ಹೆಚ್ಚುವರಿಯಾಗಿ ವಿದ್ಯುತ್ ಯೋಜನೆಗಳಿಗೆ 21,000 ಕೋಟಿ ಮೀಸಲಿಡಲಾಗಿದೆ. ಪಿರಪೈಂಟಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಸ್ಥಾವರ ನಿರ್ಮಾಣವಾಗಲಿದೆ. ಅಲ್ಲದೇ, ಬಂಡವಾಳ ಹೂಡಿಕೆಯ ಮೂಲಕ ಹೆಚ್ಚುವರಿ ನಿಧಿಯೊಂದಿಗೆ ಬಿಹಾರವನ್ನು ಬೆಂಬಲಿಸುವ ಭರವಸೆಯನ್ನೂ ನೀಡಲಾಗಿದೆ
ಅಮರಾವತಿ ಅಭಿವೃದ್ಧಿಗೆ ಬಂಪರ್ ನೆರವು: ಇನ್ನು ಎನ್ಡಿಎದ ಪ್ರಮುಖ ಹಾಗೂ ಅತಿದೊಡ್ಡ ಪಾಲುದಾರ ಪಕ್ಷ ಟಿಡಿಪಿ ಆಡಳಿತ ಇರುವ ಆಂಧ್ರಪ್ರದೇಶಕ್ಕೂ ನಿರ್ಮಲಾ ಸೀತಾರಾಮನ್ ಬಂಪರ್ ನೆರವು ಘೋಷಿಸಿದ್ದಾರೆ. ರಾಜಧಾನಿ ಅಮರಾವತಿ ಅಭಿವೃದ್ಧಿಗೆ 15 ಸಾವಿರ ಕೋಟಿ ವಿಶೇಷ ನೆರವು ನೀಡಲಾಗುವುದು ಮತ್ತು ಅಗತ್ಯಕ್ಕೆ ಅನುಗುಣವಾಗಿ ಭವಿಷ್ಯದಲ್ಲಿ ಹೆಚ್ಚಿನ ಹೆಚ್ಚುವರಿ ಹಣವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಸಿಎಂ ಚಂದ್ರಬಾಬು ನಾಯ್ಡು ಎರಡು ಬಾರಿ ದೆಹಲಿಗೆ ತೆರಳಿ ಮಾತುಕತೆ ನಡೆಸಿದ್ದರು. ಈ ವೇಳೆ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದ್ದರು. ಅವರ ಈ ಮಾತು ಇಂದಿನ ಬಜೆಟ್ ಮೂಲಕ ಸಾಬೀತಾಗಿದೆ. ರಾಜ್ಯದ ಎರಡು ಕಣ್ಣುಗಳಂತಿರುವ ಅಮರಾವತಿ ನಿರ್ಮಾಣದ ಜತೆಗೆ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸುವಂತೆ ಕೇಂದ್ರಕ್ಕೆ ಚಂದ್ರಬಾಬು ನಾಯ್ಡು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದರು. ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ಗೆ ಒಪ್ಪಿಗೆ. ಕೌಶಲಾಭಿವೃದ್ಧಿಯ ಫಲವಾಗಿ ಯುವಕರಿಗೆ ಕೈಗಾರಿಕಾ ಅಭಿವೃದ್ಧಿ ಜತೆಗೆ ಉದ್ಯೋಗಾವಕಾಶಗಳೂ ಸಿಗಲಿವೆ