ಕಾಂಗ್ರೆಸ್ ಭವನಗಳಿಗೆ ಸಾರ್ವಜನಿಕ ಭೂಮಿ ಹಂಚಿಕೆ ಆರೋಪ.
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪಕ್ಷದ ಕಚೇರಿಗಳಿಗಾಗಿ ಸಾರ್ವಜನಿಕ ಸೌಲಭ್ಯಗಳಿಗೆ ಮೀಸಲಾದ ಸಿಎ ಸೈಟ್ಗಳನ್ನು ಪಡೆದುಕೊಳ್ಳುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ದಾಖಲೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳು, ತಾಲೂಕು ಮತ್ತು ಪಂಚಾಯತ್ ಮಟ್ಟದಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಭೂಮಿ ಪಡೆದುಕೊಳ್ಳಲಾಗುತ್ತಿದೆ. ಬಡವರಿಗೆ ಮನೆ ಭೂಮಿ ನೀಡದೇ ಸರ್ಕಾರವೇ ಭೂ ಕಬಳಿಕೆಯಲ್ಲಿ ತೊಡಗಿದೆ ಎಂದು ಅವರು ಆರೋಪಿಸಿದರು.
ತುಮಕೂರು, ಚಾಮರಾಜನಗರ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವು ಕಡೆಗಳಲ್ಲಿ ಪಕ್ಷದ ಕಚೇರಿಗಳಿಗಾಗಿ ಸಿಎ ಸೈಟ್ಗಳನ್ನು ನೀಡಲಾಗಿದೆ ಎಂದು ದಾಖಲೆಗಳ ಸಮೇತ ತಿಳಿಸಿದರು.
ಎಲ್ಲೆಲ್ಲಿ ಕಡಿಮೆ ಬೆಲೆಗೆ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರಿ ಭೂಮಿ?
ಚಿಕ್ಕಬಳ್ಳಾಪುರದಲ್ಲಿ ಲಕ್ಷಾಂತರ ಮೌಲ್ಯದ ಸೈಟ್ ಕೇವಲ 22 ಲಕ್ಷ ರೂಪಾಯಿಗೆ, ಬಾದಾಮಿಯಲ್ಲಿ 1.22 ಲಕ್ಷ ರೂ,ಗೆ ನೀಡಲಾಗಿದೆ. ಎಸ್ಆರ್ ವ್ಯಾಲ್ಯೂನ ಕೇವಲ ಶೇ 5 ರ ಹಣ ನೀಡಿ ಸರ್ಕಾರ ಸೈಟ್ಗಳನ್ನು ಕಬಳಿಸುತ್ತಿದೆ ಎಂದು ಅವರು ದೂರಿದರು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬೆಲೆಬಾಳುವ ಸೈಟ್ಗಳನ್ನು ಪಡೆದುಕೊಳ್ಳಲಾಗಿದ್ದು, ಸುಮಾರು 40 ಕೋಟಿ ರೂ. ಮೌಲ್ಯದ ಭೂಮಿಯನ್ನು ಕೇವಲ 2 ಕೋಟಿ ರೂ.ಗೆ ಪಡೆದುಕೊಂಡಿರುವುದು ಸರ್ಕಾರವೇ ಭೂಕಬಳಿಕೆ ಮಾಡಿರುವುದನ್ನು ತೋರಿಸುತ್ತದೆ ಎಂದು ಹೇಳಿದರು.
ನಗರ ಯೋಜನಾ ನಿಯಮಗಳ ಪ್ರಕಾರ ಸಿಎ ಸೈಟ್ಗಳನ್ನು ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆ, ಉದ್ಯಾನವನಗಳಿಗಾಗಿ ಮಾತ್ರ ಬಳಸಬೇಕು. ಆದರೆ ರಾಜಕೀಯ ಪಕ್ಷದ ಕಚೇರಿಗಳಿಗೆ ನೀಡುವುದು ನಿಯಮ ಉಲ್ಲಂಘನೆ ಎನ್ನಲಾಗಿದೆ. ಆದಾಗ್ಯೂ ದೇವನಹಳ್ಳಿ ಪಟ್ಟಣದಲ್ಲಿ ಸುಮಾರು 17 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸಿಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ನೀಡುವ ಪ್ರಸ್ತಾವವೂ ವಿವಾದಕ್ಕೆ ಕಾರಣವಾಗಿದೆ.
For More Updates Join our WhatsApp Group :




