ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ರದ್ದು ಮಾಡಿ ಆದೇಶಿಸಿರುವುದರಿಂದ ಸುಮಾರು ಆರು ಲಕ್ಷ ಕುಟುಂಬಗಳ ಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಹೈಕೋರ್ಟ್ಗೆ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ಸ್ ತಿಳಿಸಿದೆ.
ಬೈಕ್ ಟ್ಯಾಕ್ಸಿ ಸೇವೆ ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರ್ಯಾಪಿಡೋ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ನ್ಯಾಯಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.
ಸುಮಾರು 6 ಲಕ್ಷ ಬೈಕ್ ಟ್ಯಾಕ್ಸಿ ಚಾಲಕರು ಈ ಸೇವೆಯಿಂದ ಜೀವನ ನಡೆಸುತ್ತಿದ್ದರು. ಹಲವು ಮಂದಿ ತಮ್ಮ ಬೈಕ್ಗಳನ್ನು ಫೈನಾನ್ಸ್ನಿಂದ ಸಾಲ ಪಡೆದು ಖರೀದಿ ಮಾಡಿದ್ದಾರೆ. ಅವರಿಗೆ ಮತ್ತೊಂದು ಉದ್ಯೋಗ ಲಭ್ಯವಾಗುತ್ತಿಲ್ಲ. ಇತರೆ ವಾಹನಗಳ ಸೇವೆ ಲಭ್ಯವಿಲ್ಲದ ಭಾಗಗಳಲ್ಲಿ ಬೈಕ್ ಟ್ಯಾಕ್ಸಿ ಲಭ್ಯವಾಗುತ್ತಿತ್ತು. ಇದೀಗ ಅವರ ಕುಟುಂಬಗಳಿಗೆ ತೊಂದರೆಯಾಗುತ್ತಿದ್ದು, ದಿನ ನಿತ್ಯದ ಜೀವನ ನಡೆಸುವುದಕ್ಕೆ ಕಷ್ಟಕರವಾಗಿದೆ ಎಂದು ಪೀಠಕ್ಕೆ ಸುಮಾರು 5 ಸಾವಿರ ಸದಸ್ಯರಿರುವ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ ಪರ ವಕೀಲರು ತಿಳಿಸಿದ್ದಾರೆ.
ಪ್ರಯಾಣಿಕರ ಭದ್ರತಾ ದೃಷ್ಟಿಯಿಂದ ರಾಜ್ಯ ಸರ್ಕಾರ ಎಲ್ಲ ಚಾಲಕರ ಮಾಹಿತಿ ಸಂಗ್ರಹಿಸಿ ನಿಯಂತ್ರಣ ಹೇರಬಹುದು. ಆದರೆ, ಸೇವೆಯನ್ನು ಸ್ಥಗಿತಗೊಳಿಸುವುದು ತೊಂದರೆಗೆ ಸಿಲುಕಿಸಿದಂತಾಗಲಿದೆ ಎಂದು ವಿವರಿಸಿದರು.
ಮಾಲಿನ್ಯ ದೃಷ್ಟಿಯಿಂದ ಬೈಕ್ ಟ್ಯಾಕ್ಸಿ ನಿಯಂತ್ರಣಕ್ಕೆ ಸಮಿತಿ ವರದಿ ನೀಡಿದೆ. ಆದರೆ, ಆ ಸಮಿತಿಯಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಯಾವುದೇ ತಜ್ಞರು ಇರಲಿಲ್ಲ, ಬದಲಿಗೆ ಮೆಟ್ರೋ ಮತ್ತು ಬಸ್ ನಿಗಮಗಳ ಮುಖ್ಯಸ್ಥರು ಮಾತ್ರ ಹಾಜರಿದ್ದರು. ಅಲ್ಲದೆ, ಮೋಟಾರು ವಾಹನ ಕಾಯ್ದೆಯ ಪ್ರಕಾರ ಬೈಕ್ ಟ್ಯಾಕ್ಸಿಗಳನ್ನು ಕಾಂಟ್ರಾಕ್ಟ್ ಕ್ಯಾರೇಜ್ಗಾಗಿ ಬಳಕೆ ಮಾಡುವುದಕ್ಕೆ ಅವಕಾಶವಿದೆ ಎಂದು ಪೀಠಕ್ಕೆ ವಿವರಿಸಿದರು.