ಆಘಾತಕಾರಿ ಅಂಕಿಅಂಶಗಳು ಬಯಲು.
ಕರ್ನಾಟಕದಲ್ಲಿ ಪುಟಾಣಿ ಮಕ್ಕಳನ್ನೂ ಸಹ ಮಾರಕ ಕ್ಯಾನ್ಸರ್ ಬೆಂಬಿಡದೆ ಕಾಡುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ ಭೀತಿ ದಿನೇ ದಿನೇ ಹೆಚ್ಚುತ್ತಿದ್ದು, ವರ್ಷದಿಂದ ವರ್ಷಕ್ಕೆ ಮಕ್ಕಳಲ್ಲಿ ಪ್ರಕರಣಗಳು ದುಪ್ಪಟ್ಟಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ 1,889 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗಿದ್ದು, ಇವರಲ್ಲಿ 312 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ರಾಜಧಾನಿ ಬೆಂಗಳೂರು ಒಂದರಲ್ಲೇ 349 ಮಕ್ಕಳಲ್ಲಿ ಕ್ಯಾನ್ಸರ್ ದೃಢಪಟ್ಟಿದೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಈ ರೋಗದ ಪ್ರಮಾಣ ವೈದ್ಯರು ಹಾಗೂ ಪೋಷಕರಲ್ಲಿ ಚಿಂತೆ ಮೂಡಿಸಿದೆ.
ಮಕ್ಕಳಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ಗೆ ಕಾರಣ ಏನು?
ತಜ್ಞರ ಪ್ರಕಾರ ಫಾಸ್ಟ್ ಫುಡ್, ಜಂಕ್ ಆಹಾರ, ನಾನ್ ವೆಜ್, ಐಸ್ ಕ್ರೀಮ್, ಚಾಕೊಲೇಟ್‌ಗಳಿಗೆ ಮಕ್ಕಳು ಹೆಚ್ಚು ಒಲವು ತೋರಿಸುತ್ತಿರುವುದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದಾಗಿ ಕ್ಯಾನ್ಸರ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ ಎನ್ನಲಾಗಿದೆ.
ಪ್ರತಿ ದಿನ ಕ್ಯಾನ್ಸರ್ನೊಂದಿಗೆ ಬರುತ್ತಿದ್ದಾರೆ 120ಕ್ಕೂ ಹೆಚ್ಚು ಮಕ್ಕಳು
ರಾಜ್ಯದ ಪ್ರಮುಖ ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆಯಾದ ಕಿದ್ವಾಯಿ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಆಫ್ ಆನ್ಕಾಲಜಿ ಆಸ್ಪತ್ರೆಯಲ್ಲಿ ಕಳೆದ ಒಂದು ವರ್ಷದಲ್ಲಿ 12,612 ಮಕ್ಕಳು ಹೊರರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇಲ್ಲಿ ಪ್ರತಿದಿನ 120 ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ನಿತ್ಯ 5 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಜೊತೆಗೆ ಪ್ರತಿದಿನ ಸುಮಾರು 60 ಫಾಲೋಅಪ್ ಪ್ರಕರಣಗಳನ್ನು ವೈದ್ಯರು ಪರಿಶೀಲಿಸುತ್ತಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ 35 ಸಾವಿರಕ್ಕೂ ಹೆಚ್ಚು ಮಕ್ಕಳಲ್ಲಿ ಕ್ಯಾನ್ಸರ್
ಭಾರತದಲ್ಲಿ ಪ್ರತಿ ವರ್ಷ ಸುಮಾರು 35,240 ಮಕ್ಕಳಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂಬ ಅಂದಾಜು ವ್ಯಕ್ತವಾಗಿದೆ. ಈ ಹಿನ್ನೆಲೆ, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ರೆಡಿಮೇಡ್ ಹಾಗೂ ಜಂಕ್ ಫುಡ್ಗಗಳಿಂದ ದೂರವಿರಲು ತಜ್ಞರು ಪೋಷಕರಿಗೆ ಸಲಹೆ ನೀಡಿದ್ದಾರೆ. ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಕಿದ್ವಾಯಿ ವೈದ್ಯರು ಪೋಷಕರೊಂದಿಗೆ ನಿರಂತರವಾಗಿ ಸಂವಾದ ನಡೆಸುತ್ತಿದ್ದಾರೆ.
For More Updates Join our WhatsApp Group :


