ಚಿತ್ರದುರ್ಗ: ಜಾತಿ ವ್ಯವಸ್ಥೆ ದೇವರ ಸೃಷ್ಟಿಯಲ್ಲ. ಸ್ವಾರ್ಥಿ ಮನುಷ್ಯರ ಸೃಷ್ಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ವಿದ್ಯೆ ಕಲಿಯಲು ಅವಕಾಶ ಸಿಕ್ಕ ಕೆಲವರು ಮಾತ್ರ ಆರ್ಥಿಕವಾಗಿ ಮೇಲೆ ಬಂದರು. ವಿದ್ಯೆಯ ಅವಕಾಶ ಇಲ್ಲದವರು ಕುಲ ಕಸುಬನ್ನಷ್ಟೆ ಮಾಡಿಕೊಂಡು ಹಿಂದುಳಿದರು. ಶೋಷಿತ ಸಮುದಾಯಗಳ ವಿಮೋಚನೆಗೆ ಹೋರಾಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶಿಕ್ಷಣದಿಂದಲೇ ಮೇಧಾವಿಯಾದರು ಎಂದು ಅವರು ಸ್ಮರಿಸಿದರು.
ಭೋವಿ ಗುರುಪೀಠದ ಸಿದ್ಧರಾಮೇಶ್ವರ ಮಹಾಸಂಸ್ಥಾನದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದೀಕ್ಷಾ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಶತಮಾನಗಳ ಕಾಲ ಗುಲಾಮಗಿರಿ ಇದ್ದುದರಿಂದ ತಳ ಸಮುದಾಯಗಳು ಹಿಂದೆ ಉಳಿದವು. ಈಗಲೂ ಶಿಕ್ಷಣದ ಕೊರತೆಯಿಂದ ಆ ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸ್ವಾಭಿಮಾನ ಬೆಳೆಸಿಕೊಂಡು ಗುಲಾಮಗಿರಿ ಮನಸ್ಥಿತಿಯಿಂದ ಹೊರಗೆ ಬರಬೇಕು. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಶಿಕ್ಷಣ ಪಡೆಯಲು ಸಾಧ್ಯವಾಗಿಲ್ಲ. ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದರು.
ರಾಜ್ಯದಲ್ಲಿ ಎಸ್ ಸಿ/ ಎಸ್ ಟಿ ಸಮುದಾಯಗಳ ಜನಸಂಖ್ಯೆ ಶೇ. 24 ರಷ್ಟಿದೆ. ಈ ಜನಸಂಖ್ಯೆಗೆ ಸಮವಾಗಿ ಅಭಿವೃದ್ಧಿ ಆಯವ್ಯಯದ ಶೇ. 24 ರಷ್ಟು ಹಣವನ್ನು ಈ ಸಮುದಾಯಗಳ ಏಳಿಗೆಗಾಗಿ ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಭೋವಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು ನಮ್ಮ ಸರ್ಕಾರ. ಭೋವಿ ಸಮುದಾಯದ ಪ್ರತಿನಿಧಿಯನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ಮಾಡಿದ್ದು ನಮ್ಮ ಸರ್ಕಾರ ಎಂದು ತಿಳಿಸಿದರು