ಅಲೋಕ್ ಕುಮಾರ್ ಗೆ CAT ಶಾಕ್ ತೀರ್ಪು – ಸರ್ಕಾರದ ತನಿಖೆ ಆದೇಶ ರದ್ದು | ಬಡ್ತಿ ನೀಡಲು ಆಜ್ಞೆ!

ಅಲೋಕ್ ಕುಮಾರ್ ಗೆ CAT ಶಾಕ್ ತೀರ್ಪು - ಸರ್ಕಾರದ ತನಿಖೆ ಆದೇಶ ರದ್ದು | ಬಡ್ತಿ ನೀಡಲು ಆಜ್ಞೆ!

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಆದೇಶಿಸಿದ್ದ ಇಲಾಖಾ ತನಿಖೆಯನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ರದ್ದುಗೊಳಿಸಿದೆ. ಅಲ್ಲದೇ ತಡೆಹಿಡಿಯಲಾಗಿದ್ದ ಅವರ ಬಡ್ತಿ ಮತ್ತು ಇತರ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿದೆ. ಸರ್ಕಾರದ ಇಲಾಖಾ ತನಿಖೆ ಆದೇಶ ಪ್ರಶ್ನಿಸಿ ಅಲೋಕ್ ಕುಮಾರ್ ಸಿಎಟಿ ಮೊರೆ ಹೋಗಿದ್ದರು. ಆದ್ರೆ, ಇಬ್ಬರು ನ್ಯಾಯಮೂರ್ತಿಗಳ ನಡುವೆ ವಿಭಿನ್ನ ತೀರ್ಪು ಹಿನ್ನೆಲೆಯಲ್ಲಿ ಸಿಎಟಿ ಮುಖ್ಯಸ್ಥ ನ್ಯಾಯಮೂರ್ತಿ ರಣ್‌ಜೀತ್ ಬಳಿ ಹೋಗಿದ್ದು, ಎರಡೂ ಕಡೆಯ ವಾದ ಪ್ರತಿವಾದ ಆಲಿಸಿ ಇಂದು (ಅಕ್ಟೋಬರ್ 14) ಈ ತೀರ್ಪು ನೀಡಿದ್ದಾರೆ. ಇದರೊಂದಿಗೆ ರಾಜ್ಯ ಸರ್ಕಾರಕ್ಕೆ ಹಿನ್ನೆಡೆಯಾದಂತಾಗಿದೆ.

ಏನಿದು ಪ್ರಕರಣ?

2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದಾಗ ಫೋನ್ ಟ್ಯಾಪಿಂಗ್ ಹಗರಣವು ಭಾರೀ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಅಂದಿನ ಗೃಹ ಇಲಾಖೆಯ ಕೆಲವು ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ, ಅಲೋಕ್ ಕುಮಾರ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು.  ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದರು.

ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಸಿಎಟಿಯ ಇಬ್ಬರು ನ್ಯಾಯಾಧೀಶರ ನಡುವೆ ವಿಭಿನ್ನ ತೀರ್ಪುಗಳು ಹೊರಬಂದಿದ್ದವು. ಒಬ್ಬ ನ್ಯಾಯಾಧೀಶರು ಸರ್ಕಾರದ ಆದೇಶವನ್ನು ಎತ್ತಿಹಿಡಿದರೆ, ಇನ್ನೊಬ್ಬರು ರದ್ದುಗೊಳಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಈ ಭಿನ್ನಾಭಿಪ್ರಾಯದ ಕಾರಣದಿಂದ ಪ್ರಕರಣವನ್ನು ಸಿಎಟಿ ಮುಖ್ಯಸ್ಥರಾದ ನ್ಯಾಯಮೂರ್ತಿ ರಣ್‌ಜೀತ್ ಸಿಂಗ್ ಅವರ ಬಳಿಗೆ ಕಳುಹಿಸಲಾಗಿತ್ತು.

ಬಳಿಕ ನ್ಯಾಯಮೂರ್ತಿ ರಣ್‌ಜೀತ್ ಸಿಂಗ್ ಅವರಯ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಅಂತಿಮವಾಗಿ ರಾಜ್ಯ ಸರ್ಕಾರದ ಇಲಾಖಾ ತನಿಖೆಯ ಆದೇಶವನ್ನು ರದ್ದುಗೊಳಿಸಿ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಪರವಾಗಿ ತೀರ್ಪು ನೀಡಿದ್ದಾರೆ.

ಇಲಾಖಾ ತನಿಖೆ ಬಾಕಿ ಇದ್ದ ಕಾರಣದಿಂದ ಅಲೋಕ್ ಕುಮಾರ್ ಅವರಿಗೆ ಸಲ್ಲಬೇಕಿದ್ದ ಬಡ್ತಿ ಮತ್ತು ಇತರ ಸೌಲಭ್ಯಗಳು ತಡೆ ಹಿಡಿಯಲ್ಪಟ್ಟಿದ್ದವು. ಇದೀಗ ತನಿಖೆ ಆದೇಶ ರದ್ದಾಗಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಅಲೋಕ್ ಕುಮಾರ್ ಅವರಿಗೆ ಸಲ್ಲಬೇಕಾದ ಬಡ್ತಿ ಸವಲತ್ತುಗಳನ್ನು ಹಾಗೂ ಇತರೆ ಪ್ರಯೋಜನಗಳನ್ನು ನೀಡುವಂತೆ ನ್ಯಾಯಮೂರ್ತಿಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದಾರೆ.

ಪ್ರಮೋಷನ್‌ ತಡೆ ಹಿಡಿದಿದ್ದ ಸರ್ಕಾರ

ಎಡಿಜಿಪಿ ಹುದ್ದೆಯಿಂದ ಡಿಜಿಪಿಯಾಗಿ ಅಲೋಕ್‌ ಕುಮಾರ್‌ ಬಡ್ತಿ ಪಡೆಯಬೇಕಿತ್ತು. ಆದರೆ ಕುಮಾರಸ್ವಾಮಿ (Kumaraswamy) ಮುಖ್ಯಮಂತ್ರಿ ಅವಧಿಯಲ್ಲಿ ನಡೆದಿದೆ ಎನ್ನಲಾದ 5 ವರ್ಷದ ಹಳೆ ಫೋನ್ ಟ್ಯಾಪಿಂಗ್ ಪ್ರಕರಣದ (Phone Tapping) ಬಗ್ಗೆ ಸರ್ಕಾರ ಇಲಾಖಾ ತನಿಖೆಗೆ ಆದೇಶ ನೀಡಿ ಬಡ್ತಿಯನ್ನು ತಡೆ ಹಿಡಿಯಲಾಗಿತ್ತು.

ಅಲ್ಲದೇ ಈ ಹಿಂದೆ ಅಲೋಕ್‌ ಕುಮಾರ್‌ ಕೇವಲ 45 ದಿನಗಳ ಕಾಲ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿದ್ದರು. ನಂತರ ಹುದ್ದೆಯನ್ನು ಕಿತ್ತುಕೊಳ್ಳಲಾಗಿತ್ತು. ಬಳಿಕ ಡಿಜಿಪಿ ಪ್ರೊಮೋಷನ್ ಸಹ ಕಸಿಯಲಾಗಿದ್ದು, ಅನ್ಯಾಯದ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ಅಲೋಕ್ ಕುಮಾರ್ ಪತ್ರ ಬರೆದಿದ್ದರು.

1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಲೋಕ್‌ ಕುಮಾರ್‌ ಅವರಿಗೆ ಮುಂಬಡ್ತಿ ನೀಡುವ ಸಂದರ್ಭದಲ್ಲೇ ಅವರ ಹಳೆ ಕೇಸ್ ಓಪನ್ ಮಾಡಲಾಗಿತ್ತು. ಇಲಾಖಾ ವಿಚಾರಣೆಗೆ ಆದೇಶ ನೀಡುವುದಾದರೆ ಈ ಹಿಂದೆಯೇ ನೀಡಬಹುದಿತ್ತು. ಆದರೆ ಡಿಜಿಪಿ ಸ್ಥಾನಕ್ಕೆ ಪದೋನ್ನತಿ ಸಿಗುವ ಸಮಯದಲ್ಲೇ ಹಳೆಯ ಪ್ರಕರಣವನ್ನು ಕೆದಕ್ಕಿದ್ದು ಎಷ್ಟು ಸರಿ ಎಂಬ ಚರ್ಚೆಗೆ ಗ್ರಾಸವಾಗಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *