ಎಫ್ಡಿಟಿಎಲ್ ಉಲ್ಲಂಘನೆಗೆ ರಾಜಿ ಇಲ್ಲ.
ನವದೆಹಲಿ : ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಇಂದು ರಾಜ್ಯಸಭಾ ಅಧಿವೇಶನದಲ್ಲಿ ಇಂಡಿಗೋ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. “ಸಿಬ್ಬಂದಿಯನ್ನು ನಿರ್ವಹಿಸುವುದು ವಿಮಾನಯಾನ ಸಂಸ್ಥೆಯ ಜವಾಬ್ದಾರಿ. ಎಫ್ಡಿಟಿಎಲ್ ನಿಯಮಗಳನ್ನು ಪಾಲಿಸಲಾಗುತ್ತಿದೆಯೇ ಎಂದು ಪರಿಶೀಲಿಸುವುದು ನಮ್ಮ ಕೆಲಸ. ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಒಂದು ತಿಂಗಳು ಪೂರ್ತಿ ನಾವು ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಡಿಸೆಂಬರ್ 1ರಂದು, ನಾವು ಎಫ್ಡಿಟಿಎಲ್ ಕುರಿತು ಇಂಡಿಗೋ ಜೊತೆ ಸಭೆ ನಡೆಸಿದ್ದೇವೆ, ಅವರ ಅನುಮಾನಗಳನ್ನು ಸ್ಪಷ್ಟಪಡಿಸಿದ್ದೇವೆ. ಆಗ ಅವರು ಯಾವುದೇ ಕಳವಳಗಳನ್ನು ವ್ಯಕ್ತಪಡಿಸಲಿಲ್ಲ. ಇದ್ದಕ್ಕಿದ್ದಂತೆ, ಡಿ. 3ರಂದು ಈ ಬಿಕ್ಕಟ್ಟು ಎದುರಾಗಿದೆ. ಈ ಬಿಕ್ಕಟ್ಟಿಗೆ ಇಂಡಿಗೋ ಸಂಸ್ಥೆಯ ಆಂತರಿಕ ಯೋಜನೆಯೇ ಕಾರಣ” ಎಂದು ಕೇಂದ್ರ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಹೇಳಿದ್ದಾರೆ.
“ಇಂಡಿಗೋ ಬಿಕ್ಕಟ್ಟು ಅದರ ಸಿಬ್ಬಂದಿ ಪಟ್ಟಿ ಮತ್ತು ಆಂತರಿಕ ಯೋಜನಾ ವ್ಯವಸ್ಥೆಗಳಲ್ಲಿನ ಸಮಸ್ಯೆಗಳಿಂದಾಗಿ ಸಂಭವಿಸಿದೆ. ಇಂಡಿಗೋ ತನ್ನ ದಿನನಿತ್ಯದ ಕಾರ್ಯಾಚರಣೆಗಳ ಮೂಲಕ ಸಿಬ್ಬಂದಿ ಪಟ್ಟಿಗಳನ್ನು ನಿರ್ವಹಿಸಬೇಕಾಗಿತ್ತು. ಎಫ್ಡಿಟಿಎಲ್ ಸರಿಯಾಗಿ ಕಾರ್ಯರೂಪಕ್ಕೆ ಬರುವುದನ್ನು ನಾವು ಖಚಿತಪಡಿಸಿಕೊಳ್ಳುತ್ತಿದ್ದೇವೆ ಮತ್ತು ಆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ” ಎಂದು ನಾಯ್ಡು ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಸುರಕ್ಷತೆಯು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಹೇಳಿದ ರಾಮ್ ಮೋಹನ್ ನಾಯ್ಡು, “ನಾವು ಸಿಬ್ಬಂದಿಗೆ, ಪೈಲಟ್ಗಳಿಗೆ ಮತ್ತು ಇಡೀ ವ್ಯವಸ್ಥೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಾವು ಪ್ರಯಾಣಿಕರ ಬಗ್ಗೆಯೂ ಕಾಳಜಿ ವಹಿಸುತ್ತೇವೆ. ಆದ್ದರಿಂದ ಸಚಿವಾಲಯದಿಂದ, ಎಲ್ಲಾ ವಿಮಾನಯಾನ ಸಂಸ್ಥೆಗಳು ನಿಯಮಗಳನ್ನು ಪಾಲಿಸಬೇಕು ಎಂದು ನಾವು ತುಂಬಾ ಸ್ಪಷ್ಟವಾಗಿ ಹೇಳಿದ್ದೇವೆ” ಎಂದಿದ್ದಾರೆ.
For More Updates Join our WhatsApp Group :




