ಬಡವರ ಧಾನ್ಯವಾಗಿದ್ದ ಸಿರಿಧಾನ್ಯ ಇಂದು ಸಿರಿವಂತರ ಧಾನ್ಯ – ಜಿಲ್ಲಾಧಿಕಾರಿ ವೈ ಎಸ್ ಪಾಟೀಲ

ತುಮಕೂರು : 2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಘೋಷಣೆ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ಕಾರ್ಯಗಾರವನ್ನು ನಗರದ ಬಾಲ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ತುಮಕೂರು, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಕೃಷಿ ಇಲಾಖೆ ತುಮಕೂರು ಸಹಯೋಗದಲ್ಲಿ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅವರು, ಎಲ್ಲರೂ ಕೂಡ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು, ಸಿರಿಧಾನ್ಯವನ್ನು ಬೆಳೆಸಬೇಕು ಎಂದು ಹೇಳುತ್ತಿದ್ದಾರೆ. ಆದರೆ ಹಿಂದೆ ಬೆಳೆಯುತ್ತಿದ್ದಂತಹ ಸಿರಿಧಾನ್ಯಗಳಿಂದ ರೈತರು ವಿಮುಖವಾಗುವುದಕ್ಕೆ ಏನು ಕಾರಣ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಒಂದು ವಸ್ತು ಉತ್ಪಾದನೆ ಅಥವಾ ಕೃಷಿ ಬೆಳೆಯನ್ನು ಬೆಳೆದಾಗ ಮುಖ್ಯವಾಗಿ ಲಾಭ ನೋಡುವುದು ಅನಿವಾರ್ಯ, ಈ ರೀತಿಯಾದಂತಹ ಲಾಭವಿಲ್ಲದೆ ಇರುವುದರಿಂದ ರೈತರು ಸಿರಿಧಾನ್ಯಗಳನ್ನು ಬೆಳೆಯುವುದನ್ನು ಕಡಿಮೆ ಮಾಡಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಅದರ ಅವಶ್ಯಕತೆ ಹೆಚ್ಚಾಗಿದೆ. ಇದರ ಮೂಲಕ ಆರೋಗ್ಯ ಮತ್ತು ಹಣಕಾಸು ಎರಡು ಕೂಡ ರೈತರಿಗೆ ವರದಾನವಾಗುತ್ತಿದೆ ಎಂದು ಹೇಳಿದರು.

ಹಿಂದೆ ಬಡವರ ಧಾನ್ಯವಾಗಿದ್ದ ಸಿರಿಧಾನ್ಯ ಇಂದು ಸಿರಿವಂತರ ಧಾನ್ಯವಾಗಿ ಬೆಳೆದಿದೆ. ಸತತವಾಗಿ ಮತ್ತು ನಿರಂತರವಾಗಿ ದುಡಿಯುವ ದೇಹಕ್ಕೆ ಶಕ್ತಿಯನ್ನು ನೀಡುವಂತಹದ್ದು ಸಿರಿಧಾನ್ಯಗಳು. ಹಾಗಿದ್ದ ಮಾತ್ರಕ್ಕೆ ವಿಪರೀತವಾಗಿ ಅದನ್ನು ಬಳಕೆ ಮಾಡುವುದು ಅಲ್ಲ, ಎಲ್ಲದರಲ್ಲೂ ಕೂಡ ಇತಿಮಿತಿ ಇರಬೇಕು ಎಂದ ಅವರು, ಸರ್ಕಾರದ ಕಾರ್ಯಕ್ರಮ ಎಂದು ಉದಾಸೀನ ತೊರದೆ ಅಚ್ಚುಕಟ್ಟಾಗಿ ತಮ್ಮ ಮನೆಯ ಹಬ್ಬದಂತೆ ಕೃಷಿ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಪಾಪಣ್ಣ ಅವರು ಮಾತನಾಡಿ, ಮನುಷ್ಯನ ಆರೋಗ್ಯಕ್ಕೆ ಆಹಾರ ಎನ್ನುವುದು ಬಹಳ ಮುಖ್ಯ, ಅದರಲ್ಲೂ ಉತ್ತಮ ಆರೋಗ್ಯ ಪೋಷಕಾಂಶ ಇರುವಂತಹ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯವಾಗಿದೆ. ಆದರೆ ಇಂದಿನ ದಿನಮಾನಗಳಲ್ಲಿ ಅದು ಸಿಗುತ್ತಿಲ್ಲ. ಹಸು ಸಾಕಾಣಿಕೆ ಮಾಡಿ ಅದರ ಗೊಬ್ಬರಗಳನ್ನ ಕೃಷಿ ಭೂಮಿಗೆ ಹಾಕುವ ಮೂಲಕ ಬೇಸಾಯ ಮಾಡುವಂತಹ ಕ್ರಮಗಳನ್ನು ಇದೀಗ ಯಾರು ಅನುಸರಿಸುತ್ತಿಲ್ಲ ಎಂದರು.

ಹಣ ಸಂಪಾದನೆಗೆ ಬೆಳೆಗಳನ್ನ ಬೆಳೆಯುವ ಮೂಲಕವಾಗಿ ನಮ್ಮ ಆರೋಗ್ಯವನ್ನು ನಾವು ಮರೆತಿದ್ದೇವೆ, ಹೀಗಾಗಿ ಉತ್ತಮ ಪೋಷಕಾಂಶಗಳಿರುವಂತಹ ನಮ್ಮ ಪೂರ್ವಜರು ಬಳಕೆ ಮಾಡಿರುವಂತಹ ಸಿರಿಧಾನ್ಯಗಳನ್ನು ಬಳಸುವ ಮೂಲಕ ನಾವು ಕೂಡ ಆರೋಗ್ಯವಾಗಿರಬೇಕು ಅದನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಇದೆ ವೇಳೆಯಲ್ಲಿ ಜಿಲ್ಲಾ ಮಟ್ಟದ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ 2022-23 ವಿಜೇತರಿಗೆ ಸನ್ಮಾನ ಮಾಡಲಾಯಿತು. ರಂಗೋಲಿ ಮತ್ತು ಚಿತ್ರಕಲೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆಯನ್ನು ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಿಇಒ ವಿದ್ಯಾ ಕುಮಾರಿ, ಜಂಟಿ ಕೃಷಿ ನಿರ್ದೇಶಕರಾದ ಕೆಎಚ್ ರವಿ, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಶ್ರೀಮತಿ ಜಿ ಕೆ ಅನುಸೂಯ ಕಳಸೇಗೌಡ, ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸಂಸ್ಥಾಪಕರಾದ ದಿಲೀಪ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Pragati TV Social Connect for more latest u

Leave a Reply

Your email address will not be published. Required fields are marked *