ಚಾಮರಾಜೇಶ್ವರ ರಥೋತ್ಸವ ಸಂಪನ್ನ: ಇಲ್ಲಿ ನವಜೋಡಿಗಳದ್ದೇ ಕಲರವ

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಚಾಮರಾಜೇಶ್ವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಶನಿವಾರ ಮಧ್ಯಾಹ್ನ 12.30ರ ಶುಭ ಲಗ್ನದಲ್ಲಿ ಉತ್ಸವ ಮೂರ್ತಿಯನ್ನು ತೇರಿನಲ್ಲಿ ಕುಳ್ಳಿರಿಸಿ ಜೈಕಾರ, ಮಂತ್ರಘೋಷದಿಂದ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಆಷಾಢ ಮಾಸದಲ್ಲಿ ನಡೆಯುವ ರಾಜ್ಯದ ಏಕೈಕ ರಥೋತ್ಸವ ಇದಾಗಿದ್ದು, ನೂತನ ದಂಪತಿಗಳ ಜಾತ್ರೆ ಎಂದೇ ಇದು ಹೆಸರುವಾಸಿಯಾಗಿದೆ‌‌. ಹೊಸದಾಗಿ ಮದುವೆಯಾದ ಗಂಡ – ಹೆಂಡತಿ ಅಷಾಢ ಮಾಸದ ಜಾತ್ರೆಯಲ್ಲಿ ಒಂದಾಗಿ ಹಣ್ಣು ದವನ ಎಸೆಯುತ್ತಾರೆ. ಹೊಸದಾಗಿ ಮದುವೆಯಾದ ಯುವತಿ ಆಷಾಢ ಮಾಸದಲ್ಲಿ ತವರಿಗೆ ಹೋಗುವುದರಿಂದ ಈ ಜಾತ್ರೆ ನೆಪದಲ್ಲಿ ಸತಿಪತಿಗಳು ಒಂದಾಗಿ ಹಣ್ಣು ದವನ ಎಸೆಯುವುದು ಈ ಜಾತ್ರೆಯ ವಿಶೇಷತೆ.

ಮುಮ್ಮಡಿ ಕೃಷ್ಣರಾಜ ಒಡೆಯರ್ ಆಷಾಢ ಮಾಸದಲ್ಲಿ ಜನಿಸಿದ್ದರಿಂದ ಈ ರಥೋತ್ಸವವೂ ಆಷಾಢ ಮಾಸದಲ್ಲೇ ನಡೆಯಲಿದ್ದು, ರಾಜತ್ವ ಮತ್ತು ದೈವತ್ವ ಇರುವ ವಿಶೇಷ ದೇಗುಲ ಇದಾಗಿದೆ. ರಥೋತ್ಸವ ದಿನದಂದು ಹಣ್ಣು- ದವನ ಎಸೆದರೆ ಸಂತಾನ ಭಾಗ್ಯ, ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ರಥೋತ್ಸವ ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ಎಸ್.ಬಿ.ಎಂ. ರಸ್ತೆಯಲ್ಲಿ ಸಾಗಿ ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತದಿಂದ ಮಾರಮ್ಮ ದೇವಸ್ಥಾನದ ರಸ್ತೆಯ ಮೂಲಕ ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಹಾದು ದೇವಸ್ಥಾನದ ಮೂಲಸ್ಥಾನ ತಲುಪಿತು.

Leave a Reply

Your email address will not be published. Required fields are marked *