ಚನ್ನಪಟ್ಟಣ ಉಪಚುನಾವಣೆ : ಡಿಕೆ ಶಿವಕುಮಾರ್ ಮಗಳು ಅಖಾಡಕ್ಕೆ ಎಂಟ್ರಿ..?

ಬೆಂಗಳೂರು: ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತೊಮ್ಮೆ ಹೈವೋಲ್ಟೇಜ್‌ ಆಗಿ ರಾಜ್ಯದ ಗಮನ ಸೆಳೆಯಲಿದೆ. ಈ ಚುನಾವಣೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯಾ ಹೆಗ್ಡೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ.

ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್‌ ಅವರು, ತಮ್ಮ ಎಕ್ಸ್ ಖಾತೆ ಮೂಲಕ ಸ್ಪಷ್ಟನೆ ನೀಡಿದ್ದು, ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಮುಕ್ತಾಯದ ಬೆನ್ನಲ್ಲಿಯೇ ಶಾಸಕ ಸ್ಥಾನದಿಂದ ತೆರವಾದ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಾದ ರಾಮನಗರ ಜಿಲ್ಲೆಯ ಚನ್ನಪಟ್ಟಣ (ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರಿಂದ ತೆರವು), ಬಳ್ಳಾರಿ ಜಿಲ್ಲೆಯ ಸಂಡೂರು (ಸಂಸದ ತುಕಾರಾಂ ಅವರಿಂದ ತೆರವು) ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ (ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮಮಾಯಿ ಅವರಿಂದ ತೆರವು) ಈ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಯ ಕಾವು ಹೆಚ್ಚಾಗಿದೆ. ಅದರಲ್ಲಿಯೂ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆ ಕಣವಾಗಿ ಸ್ವೀಕರಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರಕ್ಕೆ ಡಿ.ಕೆ. ಶಿವಕುಮಾರ್ ಕಳೆದೊಂದು ತಿಂಗಳಲ್ಲಿ ಮೂರ್ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಒಮ್ಮೆ ದೇವರ ದರ್ಶನಕ್ಕೆ, ಮತ್ತೊಮ್ಮೆ ರಾಜಕೀಯ ನಾಯಕರ ಭೇಟಿಗೆ ಹಾಗೂ ಮತ್ತೊಮ್ಮೆ ಚನ್ನಪಟ್ಟಣದಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸೇರಿ ಮೂರು ಬಾರಿ ಹೋಗಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಸುಳಿವನ್ನು ಕೊಟ್ಟಿದ್ದರು. ಆದರೆ, ಈಗ ಚನ್ನಪಟ್ಟಣದಲ್ಲಿ ಡಿ.ಕೆಶಿ ಅವರ ಸ್ಪರ್ಧೆಯ ಬದಲಾಗಿ ಅವರ ಮಗಳು ಐಶ್ವರ್ಯಾ ಅವರನ್ನು ಸ್ಪರ್ಧೆಗೆ ಇಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಸಂಬಂಧ ಊಹಾಪೋಗಳಿಗೆ ತೆರೆ ಎಳೆದಿದ್ದಾರೆ

Leave a Reply

Your email address will not be published. Required fields are marked *