ಚಾರ್ಮಾಡಿ ಘಾಟ್ || ನಿರ್ಬಂಧ ಉಲ್ಲಂಘಿಸಿ ಜಲಪಾತಕ್ಕೆ ಇಳಿದಿದ್ದ ಪ್ರವಾಸಿಗರು : ಬಟ್ಟೆ ಕೊಂಡೊಯ್ದ ಪೊಲೀಸರು

ಚಿಕ್ಕಮಗಳೂರು: ರಾಜ್ಯದ, ಕರಾವಳಿ, ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಲವೆಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಜಲಪಾತಕ್ಕೆ ತೆರಳದಂತೆ ನಿರ್ಬಂಧ ವಿಧಿಸಲಾಗಿದೆ. ಆದರೂ ಕೆಲವು ಪ್ರವಾಸಿಗರು ಜಲಪಾತಕ್ಕೆ ಇಳಿಯುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಇಂಥಹದ್ದೇ ಒಂದು ಘಟನೆ ಚಾರ್ಮಾಡಿ ಘಾಟ್ ನಲ್ಲಿ ನಡೆದಿದ್ದು, ಎಚ್ಚರಿಕೆ ಸಂದೇಶಗಳನ್ನೂ ಲೆಕ್ಕಿಸದೇ ಅಪಾಯ ಮಟ್ಟದಲ್ಲಿ ಧುಮ್ಮಿಕ್ಕುತ್ತಿದ್ದ ಜಲಪಾತದಲ್ಲಿ ಮೋಜು ಮಸ್ತಿ ಮಾಡಲು ಇಳಿದಿದ್ದ ಪ್ರವಾಸಿಗರ ಬಟ್ಟೆಗಳನ್ನು ಪೊಲೀಸ್ ಅಧಿಕಾರಿಗಳು ಹೊತ್ತೊಯ್ದಿದ್ದಾರೆ. ಪೊಲೀಸರ ಈ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

ಕೆಲವು ಯುವಕರು ಜಲಪಾತದಲ್ಲಿ ಸ್ನಾನ ಮಾಡುವುದಕ್ಕಾಗಿ ಜಲಪಾತಕ್ಕೆ ಇಳಿಯುತ್ತಿದ್ದರು, ಅಷ್ಟೇ ಅಲ್ಲದೇ ಕಲ್ಲು ಬಂಡೆಗಳನ್ನು ಹತ್ತುತ್ತಿದ್ದರು. ಇದನ್ನು ಗಮನಿಸಿದ ಚಿಕ್ಕಮಗಳೂರು ವಿಭಾಗದ ಪೊಲೀಸ್ ಗಸ್ತು ಸಿಬ್ಬಂದಿ, ಯುವಕರ ಬಟ್ಟೆಗಳನ್ನು ಕೊಂಡೊಯ್ದಿದ್ದಾರೆ. ಇದನ್ನು ಗಮನಿಸಿದ ಯುವಕರು, ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿಯೇ ವಾಗ್ವಾದಕ್ಕೆ ಇಳಿದಿದ್ದಾರೆ.

ಮಳೆಗಾಲದಲ್ಲಿ ಇಂತಹ ಚಟುವಟಿಕೆಗಳನ್ನು ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಪೋಲೀಸರು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರೂ, ಯುವಕರು ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *