ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವ ಮುನ್ನ ಪರೀಕ್ಷಿಸಿ : ‘RTE’ ಅಡಿ ಮಾನ್ಯತೆ ಪಡೆಯುವುದು ಕಡ್ಡಾಯ

ಬೆಂಗಳೂರು : ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ-2009 ಮತ್ತು ಕಾಯ್ದೆಯಡಿ ರೂಪಿಸಲಾದ ನಿಯಮಗಳು-2012 ರಡಿ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು (ಇತರೆ ಪಠ್ಯಕ್ರಮ ಒಳಗೊಂಡ ಶಾಲೆಗಳು) ಮಾನ್ಯತೆಯನ್ನು ಪಡೆಯುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಶಿಕ್ಷಣ ಹಕ್ಕು ಕಾಯ್ದೆ-2009 ರ ಸೆಕ್ಷನ್-18ರ ಅಡಿಯಲ್ಲಿ ಎಲ್ಲಾ ಖಾಸಗಿ ಅನುದಾನಿತ ಮತ್ತು ಎಲ್ಲಾ ಪಠ್ಯಕ್ರಮದ ಖಾಸಗಿ ಅನುದಾನರಹಿತ ಶಾಲೆಗಳು ನಿಗದಿಪಡಿಸಿರುವ ಮಾನದಂಡಗಳನ್ನು ಅನುಪಾಲಿಸಿ, ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-11 ರಂತೆ ನಿಗದಿಪಡಿಸಿರುವ ನಮೂನೆ-1 (Form-1)ರಲ್ಲಿ ಸ್ವಯಂ ದೃಢೀಕರಣದೊಂದಿಗೆ ಅರ್ಜಿ ಸಲ್ಲಿಸಿ, ಮಾನ್ಯತೆ ಪಡೆಯುವುದು ಕಡ್ಡಾಯವಾಗಿರುತ್ತದೆ.

ಈ ರೀತಿ ಪಡೆದ ಮಾನ್ಯತೆಯ ಅವಧಿಯು 05 ವರ್ಷಗಳಾಗಿರುತ್ತದೆ. ಯಾವುದೇ ಶಾಲೆಯು ನಿಗದಿಪಡಿಸಿರುವ ಮಾನದಂಡಗಳನ್ನು ಅಥವಾ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದಲ್ಲಿ (ಕೇಂದ್ರ ಪಠ್ಯಕ್ರಮ ಮಂಡಳಿ ಅಫಿಲೇಷನ್ ನೀಡಿ ಕಾಲಕಾಲಕ್ಕೆ ನವೀಕರಿಸಿಕೊಂಡಿದಾಗ್ಯೂ) ಅಂತಹ ಶಾಲೆಯ ಮಾನ್ಯತೆಯನ್ನು ಹಿಂಪಡೆಯುವ ಕ್ರಮದ ಬಗ್ಗೆ ಸೆಕ್ಷನ್-18(3) ಮತ್ತು ನಿಯಮ-12 ರಲ್ಲಿ ಸ್ಪಷ್ಟ ನಿರ್ದೇಶನ ನೀಡಲಾಗಿರುತ್ತದೆ. ಯಾವುದೇ ಶಾಲೆಯು ಮಾನ್ಯತೆ ಪಡೆಯದೇ/ಮಾನ್ಯತೆ ನವೀಕರಿಸದೇ ಶಾಲೆಯನ್ನು ಮುಂದುವರಿಸುತ್ತಿದ್ದಲ್ಲಿ ಅಥವಾ ಮಾನ್ಯತೆಯನ್ನು ಹಿಂಪಡೆದ ನಂತರವೂ ಶಾಲೆಯನ್ನು ಮುಂದುವರೆಸುತ್ತಿದ್ದಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಸೆಕ್ಷನ್-18(5) ರಲ್ಲಿ ನಿರ್ದೇಶನ ನೀಡಲಾಗಿದೆ.

ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-11ರಡಿ ಮಾನ್ಯತೆ ನೀಡಲು ಸಕ್ರಮ ಪ್ರಾಧಿಕಾರಿ ಆಯಾ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರು ಆಗಿದ್ದು, ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳು ಕಾಯ್ದೆ ಮತ್ತು ನಿಯಮಾನುಸಾರ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಿ ಕಡ್ಡಾಯವಾಗಿ ಮಾನ್ಯತೆ ಪಡೆಯುವ /ಮಾನ್ಯತೆ ನವೀಕರಿಸಿಕೊಳ್ಳುವ ಬಗ್ಗೆ ಅಗತ್ಯ ಕ್ರಮವಹಿಸಲು ಸೂಚಿಸಿದೆ. ಶಿಕ್ಷಣ ಹಕ್ಕು ಕಾಯ್ದೆ ಸೆಕ್ಷನ್-18(5) ರ ಉಲ್ಲಂಘನೆಯ ಪ್ರಕರಣದಲ್ಲಿ ಅಂತಹ ಶಾಲೆಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲು ಕರ್ನಾಟಕ ಕಡ್ಡಾಯ ಮತ್ತು ಉಚಿತ ಶಿಕ್ಷಣ ಹಕ್ಕು ನಿಯಮಗಳು-2012 ರ ನಿಯಮ-23 ರಲ್ಲಿ ಸೂಚಿಸಿರುವಂತೆ ಅಗತ್ಯ ಕ್ರಮ ವಹಿಸಲು ಸೂಚಿಸಿದೆ. ನಿಯಮ-11(6) ರಂತೆ ಮಾನ್ಯತೆ ಪಡೆದ ಶಾಲೆಗಳ ಪಟ್ಟಿಯನ್ನು ಉಪನಿರ್ದೇಶಕರು(ಆಡಳಿತ) ರವರು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಲು ಸೂಚಿಸಿದೆ.

ತಮ್ಮ ವ್ಯಾಪ್ತಿಯಲ್ಲಿ ಯಾವುದೇ ರಾಜ್ಯ/ಕೇಂದ್ರ ಪಠ್ಯಕ್ರಮದಲ್ಲಿ ನೋಂದಾಯಿತ ಶಾಲೆಯಾಗಿದಾಗ್ಯೂ RTE ಅಡಿ ಮಾನ್ಯತೆ ಪಡೆಯದೇ ಹಾಗೂ ಮಾನ್ಯತೆ ನವೀಕರಿಸದೇ ನಡೆಯುತ್ತಿದ್ದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ತಿಳಿಸಿದೆ.

Leave a Reply

Your email address will not be published. Required fields are marked *