ವಿದ್ಯಾರ್ಥಿನಿಗೆ ಎದೆನೋವು : ಶರವೇಗದಲ್ಲಿ ಚಿಕಿತ್ಸೆಗೆ ಕರೆದೊಯ್ದ ಬಸ್​ ಚಾಲಕ

ಮಂಗಳೂರು: ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಬಸ್​ನ ಚಾಲಕ ಮತ್ತು ನಿರ್ವಾಹಕ ಸ್ಪಂಧಿಸಿದ್ದು, ಬಸ್​ ಅನ್ನು ಎಲ್ಲಿಯೂ ನಿಲ್ಲಿಸದೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೇ ಅಲ್ಲ, ಚಾಲಕನು ವಿದ್ಯಾರ್ಥಿನಿಯನ್ನು ಹೊತ್ತು ಆಸ್ಪತ್ರೆಯ ಒಳಗೆ ಸಾಗಿಸಿದರು. ಕೂಡಲೇ ಆಕೆಯನ್ನು ಚಿಕಿತ್ಸೆಗೆ ದಾಖಲಿಸಲಾಯಿತು. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನಿದು ಘಟನೆ: ಕೃಷ್ಣಪ್ರಸಾದ್ ಎಂಬ ಹೆಸರಿನ ಖಾಸಗಿ ಬಸ್ಸಿನಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಂಗಳಾದೇವಿ-ಕುಂಜತ್ತಬೈಲ್ ನಡುವೆ ಸಂಚರಿಸುವ ರೂಟ್ ನಂ.13F ಕೃಷ್ಣಪ್ರಸಾದ್ ಬಸ್ ಎಂದಿನಂತೆ ಕೂಳೂರು ಮಾರ್ಗವಾಗಿ ಮಂಗಳಾದೇವಿ ಕಡೆಗೆ ಸಂಚರಿಸುತ್ತಿತ್ತು. ಬಂಗ್ರಕೂಳೂರಿನಲ್ಲಿ 10-15 ಮಂದಿ ಯೆನಪೋಯ ಕಾಲೇಜು ವಿದ್ಯಾರ್ಥಿಗಳು ಬಸ್ ಹತ್ತಿದ್ದಾರೆ‌. ಬಸ್ ಕೊಂಚ ಮುಂದೆ ಹೋಗಿ ಇನ್ನೇನು ಕೊಟ್ಟಾರ ತಲುಪುತ್ತಿದ್ದಂತೆ ಏಕಾಏಕಿ ವಿದ್ಯಾರ್ಥಿನಿಯೊಬ್ಬಳಿಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಡ್ರೈವರ್ ಗಜೇಂದ್ರ ಕುಂದರ್ ಮತ್ತು ನಿರ್ವಾಹಕರಾದ ಮಹೇಶ್ ಪೂಜಾರಿ ಹಾಗೂ ಸುರೇಶ್ ಬಸ್ ಅನ್ನು ನೇರ ಆಸ್ಪತ್ರೆಗೆ ಕೊಂಡೊಯ್ಯುವ ನಿರ್ಧಾರ ಮಾಡಿದರು.

ಗಜೇಂದ್ರ ಕುಂದರ್ ಆಂಬ್ಯುಲೆನ್ಸ್​ ಮಾದರಿಯ ಸೈರಾನ್ ಹಾಕಿಕೊಂಡು ಬಸ್ ಅನ್ನು ಎಲ್ಲೂ ನಿಲ್ಲಿಸದೆ ಚಲಾಯಿಸಿದ್ದಾರೆ. 6 ಕಿ.ಮೀ. ದೂರವನ್ನು ಕೇವಲ 6 ನಿಮಿಷಗಳಲ್ಲಿ ಕ್ರಮಿಸಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ತಲುಪಿದ್ದಾರೆ. ಆಸ್ಪತ್ರೆಯ ಸೆಕ್ಯುರಿಟಿ ಸೇರಿದಂತೆ ಏನನ್ನೂ ಗಣನೆಗೆ ತೆಗೆದುಕೊಳ್ಳದೆ ಬಸ್‌ ಅನ್ನು ಆವರಣದೊಳಗಡೆ ಕೊಂಡೊಯ್ದು ನಿಲ್ಲಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿನಿಗೆ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ.

Leave a Reply

Your email address will not be published. Required fields are marked *