ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ..!!

ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರ ಸರ್ಕಾರ ಭಾನುವಾರಕ್ಕೆ ಶತದಿನ ಪೂರೈಸಿದೆ. ಕಳೆದ ಮೇ 20ರಂದು ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಹೊರೆ ಹೊತ್ತು ಮುನ್ನಡೆದಿದೆ. ತಮ್ಮ ಈ 100 ದಿನಗಳ ಆಡಳಿತದ ಬಗ್ಗೆ ‘ನುಡಿದಂತೆ ನಡೆಯುತ್ತಿದ್ದೇವೆ, ಗ್ಯಾರಂಟಿ ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜತೆಗೆ ದಾರ್ಶನಿಕರು ತೋರಿದ ಹಾದಿಯಲ್ಲಿ ಅಭಿವೃದ್ಧಿ ರಥ ಮುನ್ನಡೆಸುತ್ತಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ

ಮತ್ತೊಂದೆಡೆ, ‘ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿ ನಮ್ಮ ಸರ್ಕಾರ ಸೆಂಚುರಿ ಬಾರಿಸಿ ಮುನ್ನುಗುತ್ತಿದೆ. ನಮ್ಮ ಸರ್ಕಾರದ ಕೆಲಸಗಳು ಜನರ ಕಣ್ಣಿಗೆ ಕಾಣುತ್ತಿವೆ. ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ದೇಶದ ಯಾವ ರಾಜ್ಯ ಸರ್ಕಾರ ಇಷ್ಟುಕೆಲಸ ಮಾಡಿದೆ ಹೇಳಿ?’ ಎಂದು ಪ್ರಶ್ನಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಸರ್ಕಾರದ ಶತದಿನಗಳ ಸಾಧನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೊದಲ ನೂರು ದಿನಗಳ ಆಡಳಿತದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ. ಗ್ಯಾರಂಟಿ ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಜತೆಗೆ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು, ಕನಕದಾಸ ಹಾಗೂ ನಾರಾಯಣ ಗುರುಗಳಂತಹ ದಾರ್ಶನಿಕರು ತೋರಿದ ಸಮಾನತೆಯ ಹಾದಿಯಲ್ಲಿ ನಾಡನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಅಭಿವೃದ್ಧಿ ರಥ ಮುನ್ನಡೆಸುವ ನಮ್ಮೊಂದಿಗೆ ನಿಮ್ಮೆಲ್ಲರ ಸಹಕಾರವಿರಲಿ’ ಎಂದು ಮನವಿ ಮಾಡಿದ್ದಾರೆ.

ನಮ್ಮ ಸರ್ಕಾರ ನೂರು ದಿನಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು ರಾಜ್ಯದೆಲ್ಲೆಡೆ ಉಚಿತವಾಗಿ ಬಸ್ ಪ್ರಯಾಣ ಮಾಡುವಂತೆ ನೋಡಿಕೊಂಡಿದೆ. ಗೃಹಲಕ್ಷ್ಮೇ ಯೋಜನೆಯಡಿ 1.10 ಕೋಟಿ ಮನೆ ಯಜಮಾನಿಯರಿಗೆ ಆ.30ರಿಂದ ಪ್ರತಿ ತಿಂಗಳು 2 ಸಾವಿರ ರು. ಹಣ ತಲುಪಲಿದೆ. 1.36 ಕೋಟಿ ಜನರಿಗೆ ಅನ್ನಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ತಲುಪುತ್ತಿದೆ. 1.41 ಕೋಟಿ ಗ್ರಾಹಕರಿಗೆ 200 ಯೂನಿಟ್ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆ. ಡಿಸೆಂಬರ್ ವೇಳೆಗೆ ನಿರುದ್ಯೋಗಿ ಯುವಕರಿಗೆ ಭತ್ಯೆ ಯೋಜನೆ ಜಾರಿ ಮಾಡುತ್ತೇವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *