ಲೋಸಕಭಾ ಚುನಾವಣೆಯ ಫಲಿತಾಂಶ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದ್ದು, ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಲೋಕಸಭಾ ಚುನಾವಣಾ ಫಲಿತಾಂಶ ಕ್ಷಣಗಣನೆ ಹೊತ್ತಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ರಾಜ್ಯ ಸರ್ಕಾರದ ಚಿಹ್ನೆ ಇರುವ ಲೆಟರ್ ಹೆಡ್ನಲ್ಲಿ ಚುನಾವಣಾ ಆಯುಕ್ತರು, ವಿಭಾಗಕ್ಕೆ ಪತ್ರ ವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಬೆಂಗಳೂರು ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಡಾ.ಕೆ.ಸುಧಾಕರ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಕೆ ಮಾಡಿರುವುದರಿಂದ ಈ ಬಗ್ಗೆ, ಸದರಿಯವರ ವಿರುದ್ಧ ಪೊಲೀಸ್ ಅಧಿಕಾರಿಗಳ ಮೂಲಕ ಮಾಜಿ ಸಚಿವ ಡಾ. ಕೆ.ಸುಧಾಕರ್ ರವರ ವಿರುದ್ಧ ಉಲ್ಲೇಖ ರೀತಿ ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳು ಸೂಚಿಸಿ ಪತ್ರವನ್ನು ರವಾನಿಸಿಕೊಂಡಿರುತ್ತಾರೆ.
ಏಪ್ರಿಲ್ 2ರಂದು ಹಿಂದೆ ಚುನಾವಣೆ ಮಾದರಿ ನೀತಿ ಸಂಹಿತೆ ಸಂದರ್ಭದಲ್ಲಿ ಡಾ. ಕೆ.ಸುಧಾಕರ್ ತಮ್ಮ ಕಚೇರಿ, ಮನೆಯಲ್ಲಿ (ಸ್ಪಷ್ಟವಾಗಿ ವಿಳಾಸ ತಿಳಿದುಬಂದಿರುವುದಿಲ್ಲ) ಲೆಟರ್ ಹೆಡ್ನಲ್ಲಿ ಚುನಾವಣಾ ಆಯುಕ್ತರು, ವಿಭಾಗ ರವರಿಗೆ ಪತ್ರ ವ್ಯವಹಾರ ಮಾಡಿದ್ದು, ಸದರಿ ಲೆಟರ್ ಹೆಡ್ನಲ್ಲಿ ಕರ್ನಾಟಕ ಸರ್ಕಾರದ ಚಿಹ್ನೆಯನ್ನು ಅನಧಿಕೃತವಾಗಿ ಬಳಕೆ ಮಾಡಿರುವುದಾಗಿ ಕಂಡು ಬಂದಿದೆ ಎಂದು ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.