ರಾಜ್ಯದಲ್ಲಿ ಬಾಲ ಗರ್ಭಿಣಿ ಪ್ರಕರಣಗಳು ಏರಿಕೆ : ಬೆಂಗಳೂರು ಮೊದಲು

ಬೆಂಗಳೂರು: ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಅಧಿಕವಾಗಿರುವುದು ಎಚ್ಚರಿಕೆಯ ಗಂಟೆ. ಬಾಲ್ಯ ವಿವಾಹದ ಪಿಡುಗನ್ನು ತೊಡೆದುಹಾಕುವಲ್ಲಿ ಎಷ್ಟೇ ಪ್ರಯತ್ನಿಸಿದರೂ, ನಿಯಂತ್ರಣ ಮಾತ್ರ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಹೀಗಾಗಿ, 18 ವರ್ಷಗಳಿಗಿಂತ ಕಡಿಮೆ ವಯಸ್ಸಿನವರು ಗರ್ಭಿಣಿಯಾಗುತ್ತಿರುವುದು ಕಳವಳಕಾರಿ ವಿಚಾರವಾಗಿದೆ.

ರಾಜ್ಯದಲ್ಲಿ ಜ.1, 2022ರಿಂದ ಮಾರ್ಚ್ 31, 2023ರವರೆಗೆ 13,477 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂದು ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ (RCH) ದತ್ತಾಂಶ ತಿಳಿಸುತ್ತದೆ. ಅಚ್ಚರಿ ಎಂಬಂತೆ, ಬೆಂಗಳೂರು‌ ನಗರವೇ ಅತೀ ಹೆಚ್ಚು ಬಾಲಗರ್ಭಿಣಿ ಪ್ರಕರಣಗಳನ್ನು ಹೊಂದಿದೆ. ನಗರದಲ್ಲಿ 1,334 ಬಾಲ ಗರ್ಭಿಣಿ ಪ್ರಕರಣ ಪತ್ತೆಯಾಗಿವೆ.

ಸುಶಿಕ್ಷಿತರೇ ಇರುವ ನಗರ ಪ್ರದೇಶವಾದ ರಾಜ್ಯ ರಾಜಧಾನಿಯೇ ಬಾಲ ಗರ್ಭಿಣಿ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿದೆ. ಉಳಿದಂತೆ, ಬೆಳಗಾವಿಯಲ್ಲಿ 986, ಮೈಸೂರು 943, ಚಿತ್ರದುರ್ಗ 806, ವಿಜಯಪುರ 769 ಬಾಲ ಗರ್ಭಿಣಿಯರ ಪ್ರಕರಣಗಳಿವೆ.

ಕಲಬುರ್ಗಿ ಜಿಲ್ಲೆಯಲ್ಲಿ 764, ತುಮಕೂರಿನಲ್ಲಿ 689, ಮಂಡ್ಯದಲ್ಲಿ 647, ಬಾಗಲಕೋಟೆಯಲ್ಲಿ 567, ವಿಜಯನಗರ 507, ರಾಯಚೂರಲ್ಲಿ 493, ಯಾದಗಿರಿಯಲ್ಲಿ 481, ಬಳ್ಳಾರಿಯಲ್ಲಿ 459, ದಾವಣಗೆರೆಯಲ್ಲಿ 457, ಬೀದರ್‌ನಲ್ಲಿ 412, ಕೋಲಾರದಲ್ಲಿ 396 ಮತ್ತು ಹಾಸನದಲ್ಲಿ 317 ಬಾಲ ಗರ್ಭಿಣಿ ಪ್ರಕರಣಗಳು ಪತ್ತೆಯಾಗಿವೆ ಎಂಬ ಅಂಕಿಅಂಶವನ್ನು ನೀಡಲಾಗಿದೆ.

ರಾಮನಗರದಲ್ಲಿ 267, ಚಿಕ್ಕಬಳ್ಳಾಪುರದಲ್ಲಿ 263, ಶಿವಮೊಗ್ಗದಲ್ಲಿ 247, ಹಾವೇರಿಯಲ್ಲಿ 246, ಚಿಕ್ಕಮಗಳೂರಲ್ಲಿ 242, ಕೊಪ್ಪಳದಲ್ಲಿ 228, ಬೆಂಗಳೂರು ಗ್ರಾಮಾಂತರದಲ್ಲಿ 216, ಚಾಮರಾಜನಗರದಲ್ಲಿ 180, ಧಾರವಾಡದಲ್ಲಿ 178, ಕೊಡಗುನಲ್ಲಿ 127 ಮತ್ತು ಗದಗ ಜಿಲ್ಲೆಯಲ್ಲಿ 105, ಉತ್ತರ ಕನ್ನಡದಲ್ಲಿ 71, ದಕ್ಷಿಣ ಕನ್ನಡದಲ್ಲಿ 48 ಹಾಗೂ ಉಡುಪಿ ಜಿಲ್ಲೆಯಲ್ಲಿ 32 ಬಾಲ ಗರ್ಭಿಣಿ ಪ್ರಕರಣಗಳಿವೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂಥ ಪ್ರಕರಣಗಳು ಪತ್ತೆಯಾಗುತ್ತಿವೆ.

ನಿಯಂತ್ರಣಕ್ಕೆ ಕ್ರಮಗಳೇನು?: ಎಲ್ಲಾ ಸಂಬಂಧಿತ ಇಲಾಖೆಗಳು ಬಾಲ್ಯವಿವಾಹ ಮತ್ತು ಬಾಲ ಗರ್ಭಿಣಿಯರ ಪ್ರಕಣಗಳ ತಡೆಗಟ್ಟಲು ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದು ಮತ್ತು ಬಾಲ್ಯವಿವಾಹ ನಿಷೇಧ ಕಾಯ್ದೆಯ ಸಮರ್ಪಕ ಅನುಷ್ಠಾನಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *