ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕನ ಬಾಯಿ ಶುದ್ಧ ಮಾಡಿ: ಸಿಎಂ ಸಿದ್ದರಾಮಯ್ಯ

ಬಿಜೆಪಿಯಿಂದ ಕಾಂಗ್ರೆಸ್ನ 50 ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಫರ್: ಸಿಎಂ

ಬೆಂಗಳೂರು : ಪ್ರತಿ ಸಾರಿ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ, ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ಬುದ್ದಿ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ

ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬುವರಿಗೆ ಶಾಸಕ ಮುನಿರತ್ನ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಬಯಲಾದ ಬೆನ್ನಲ್ಲೇ, ಮುನಿರತ್ನ ವಿರುದ್ಧ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದ್ದು, ಶಾಸಕರನ್ನು ಬಂಧನಕ್ಕೊಳಪಡಿಸಲಾಗಿದೆ.

ಇದನ್ನು ಓದಿ : ಶಾಸಕ ಮುನಿರತ್ನ 2 ದಿನ ಪೊಲೀಸ್‌ ಕಸ್ಟಡಿಗೆ

ಈ ಪ್ರಕರಣ ಸಂಬಂದ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೈರಲ್‌ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಆತನಿಂದ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ. ಶೇ.40 ಕಮಿಷನ್‌ ಸರ್ಕಾರ ತೊಲಗಿದರೂ ಅದರಿಂದ ಹುಟ್ಟಿರುವ ರಕ್ತಬೀಜಾಸುರರು ಉಳಿದಿದ್ದಾರೆ. ಈಗ ನಾವು ಕೈಗೆತ್ತಿಕೊಂಡಿರುವ ಸ್ವಚ್ಚತಾ ಅಭಿಯಾನದಲ್ಲಿ ಈ ಹೊಲಸನ್ನು ಎಲ್ಲಿ ಇಡಬೇಕು ಅಲ್ಲಿಗೆ ಖಂಡಿತಾ ತಲುಪಿಸುತ್ತೇವೆ.

ಮಾದ್ಯಮಗಳ ಮುಂದೆ ನಿಂತು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಉಪದೇಶ ಕೊಡುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ತಮ್ಮದೇ ಗೂಂಡಾ ಪ್ರವೃತ್ತಿಯ ಶಾಸಕ ಮುನಿರತ್ನ ಎದುರು ನಿಂತು ಮಾತನಾಡುವ ಧೈರ್ಯ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಈಗ ಬಿಜೆಪಿ ನಾಯಕರಿಗೆ ಉಳಿದಿರುವುದು ಎರಡೇ ದಾರಿ. ಒಂದು ಮುನಿರತ್ನ ಅವರ ಹೇಳಿಕೆಗೆ ಬೆಂಬಲ ಕೊಟ್ಟು ತಾವು ದಲಿತ ವಿರೋಧಿಗಳು ಎಂದು ಒಪ್ಪಿಕೊಳ್ಳುವುದು, ಇಲ್ಲವೇ ನಾಡಿನ ದಲಿತ ಸಮುದಾಯದವರ ಬಳಿ ಬಹಿರಂಗ ಕ್ಷಮೆ ಕೇಳಿ, ಮುನಿರತ್ನ ಅವರನ್ನು ಪಕ್ಷದಿಂದ ಹೊರದಬ್ಬುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *